ನವದೆಹಲಿ[ಮೇ.31]: ರಾಜ್ಯದಲ್ಲಿರುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮೂರು ದಿನಗಳಿಂದ ಗಂಭೀರ ಪ್ರಯತ್ನ ನಡೆಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ದೋಸ್ತಿ ಸರ್ಕಾರ ಉರುಳಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಭರವಸೆ ನೀಡಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ ಬಳಿಕ ಮೊದಲ ಬಾರಿಗೆ ರಾಹುಲ್‌ ಗಾಂಧಿ ಅವರನ್ನು ಕುಮಾರಸ್ವಾಮಿ ಗುರುವಾರ ಭೇಟಿಯಾದರು. ತುಘಲಕ್‌ ಲೇನ್‌ನಲ್ಲಿನ ರಾಹುಲ್‌ ನಿವಾಸದಲ್ಲಿ ಸುಮಾರು 25 ನಿಮಿಷ ಕಾಲ ಉಭಯ ನಾಯಕರು ಸಮಾಲೋಚನೆ ನಡೆಸಿದರು.

ಸರ್ಕಾರವನ್ನು ಉಳಿಸಿಕೊಳ್ಳಲೇಬೇಕು ಎಂದು ನಾನು ಈಗಾಗಲೇ ಅತೃಪ್ತ ಕಾಂಗ್ರೆಸಸ್‌ ಶಾಸಕರನ್ನು ಕರೆದು ಮಾತುಕತೆ ನಡೆಸುತ್ತಿದ್ದೇನೆ. ಅವರ ಅಸಮಾಧಾನಕ್ಕೆ ಕಾರಣಗಳು ನನಗೆ ಅರ್ಥವಾಗಿದ್ದು ಅವರ ನೋವಿಗೆ ಸ್ಪಂದಿಸುತ್ತಿದ್ದೇನೆ. ಈ ಮೂಲಕ ಸರ್ಕಾರವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ನನ್ನ ಕಡೆಯಿಂದ ಸಕಲ ಪ್ರಯತ್ನಗಳನ್ನು ನಡೆಸುತ್ತಿದ್ದೇನೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ನ ಹಿರಿಯ ನಾಯಕರೂ ಗಂಭೀರ ಪ್ರಯತ್ನ ನಡೆಸಬೇಕು ಎಂದು ಕುಮಾರಸ್ವಾಮಿ ಅವರು ರಾಹುಲ… ಗಾಂಧಿ ಅವರಲ್ಲಿ ಕೋರಿದ್ದಾರೆ ಎಂದು ತಿಳಿದು ಬಂದಿದೆ. ರಾಹುಲ್‌ ಗಾಂಧಿ ಕೂಡ ಸರ್ಕಾರ ಉಳಿಸಿಕೊಂಡು ಹೋಗಲು ನಿಮ್ಮ ಕಡೆಯಿಂದ ಗರಿಷ್ಠ ಪ್ರಯತ್ನ ನಡೆಸಿ, ನಾನು ಕೂಡ ರಾಜ್ಯದ ನಾಯಕರಿಗೆ ಸೂಚನೆ ನೀಡುತ್ತೇನೆ. ಸರ್ಕಾರವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳುವುದು ಬೇಡ ಎಂದು ಕುಮಾರಸ್ವಾಮಿಗೆ ಹೇಳಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಹಿನ್ನಡೆಗೆ ಕುಮಾರಸ್ವಾಮಿ ಅವರಲ್ಲಿ ರಾಹುಲ್‌ ಗಾಂಧಿ ಅಘಾತ ವ್ಯಕ್ತಪಡಿಸಿದ್ದಾರೆ. ನಮ್ಮದೇ ಸರ್ಕಾರವಿರುವ ಮಧ್ಯ ಪ್ರದೇಶ, ರಾಜಸ್ಥಾನ ದಲ್ಲೂ ತೀವ್ರ ಹತಾಶೆಯಾಗಿದೆ. ಯಾಕೆ ಹೀಗಾಗಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಕುಮಾರಸ್ವಾಮಿ ಅವರಲ್ಲಿ ರಾಹುಲ… ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿನ ಹಿನ್ನಡೆಯ ಕಾರಣಗಳ ಬಗ್ಗೆ ಈ ಭೇಟಿ ಸಂದರ್ಭದಲ್ಲಿ ಯಾವುದೇ ವಿವರ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಎಐಸಿಸಿಯ ಅಧ್ಯಕ್ಷ ಸ್ಥಾನ ತ್ಯಜಿಸುವ ನಿರ್ಧಾರ ತಾಳಿರುವ ರಾಹುಲ್‌ ಗಾಂಧಿ ಅವರಿಗೆ ನೀವು ನಿರ್ಧಾರ ಬದಲಾಯಿಸಿ. ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯಿರಿ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.