ಬೆಂಗಳೂರು (ಸೆ. 05): ಹಾಲಿನ ಮಾದರಿಯಲ್ಲೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮತ್ತು ಮದ್ಯದ ಅಂಗಡಿಗಳು ಇಲ್ಲದ ತಾಂಡಾ, ಹಳ್ಳಿಗಳಿಗೆ ಸಂಚಾರಿ ಮದ್ಯದ ಅಂಗಡಿ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.

ಬುಧವಾರ ವಿಕಾಸ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯದ ಅಂಗಡಿಗಳಿಲ್ಲದ ತಾಂಡಾಗಳು ಮತ್ತು ಗ್ರಾಮಗಳಿಗೆ ಸಂಚಾರಿ ಮದ್ಯದ ಅಂಗಡಿ (ಮೊಬೈಲ್ ಶಾಪ್) ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ. ಹಾಗೆಯೇ ಹಾಲಿನ ಮಾದರಿಯಲ್ಲಿ ಅವಶ್ಯಕತೆ ಇದ್ದವರಿಗೆ ಮದ್ಯವನ್ನು ಮನೆಗೆ ಪೂರೈಕೆ ಮಾಡಲು ಚಿಂತನೆ ಇದ್ದು, ಅದಕ್ಕಾಗಿ ಮದ್ಯ ಕೊಳ್ಳುವವರಿಗೆ ಮೊದಲೇ ಪರವಾನಗಿ ಕಾರ್ಡ್‌ಗಳನ್ನು ಕೊಡಬೇಕಾಗುತ್ತದೆ. ಈ ಕುರಿತು ಇಲಾಖೆ ಸಮಗ್ರ ಯೋಜನೆ ರೂಪಿಸಲು ಚಿಂತನೆ ನಡೆಸಿದೆ ಎಂದು ಮಾಹಿತಿ ನೀಡಿದರು.

ಕೆಲವು ಹಳ್ಳಿಗಳಲ್ಲಿ ಮದ್ಯದ ಅಂಗಡಿಗಳು ಇಲ್ಲ. ಸುಮಾರು 10 ರಿಂದ 15 ಕಿ.ಮೀ ದೂರದವರೆಗೆ ಬಂದು ಮದ್ಯ ಖರೀದಿ ಮಾಡುವಂತ ಪರಿಸ್ಥಿತಿ ಇದೆ. ಅಲ್ಲದೇ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳಭಟ್ಟಿ ಹಾವಳಿ ಹೆಚ್ಚಾಗಿದ್ದು, ಗುಣಮಟ್ಟವಲ್ಲದ ಮದ್ಯ ಸೇವನೆಯಿಂದ ಅನೇಕರು ಆರೋಗ್ಯ ಮತ್ತು ಜೀವ ಕಳೆದುಕೊಳ್ಳುತ್ತಿದ್ದಾರೆ. ಅದನ್ನು ನಿವಾರಿಸಲು ಗುಣಮಟ್ಟದ ಮದ್ಯ ಪೂರೈಕೆಗೆ ಇಲಾಖೆ ಆದ್ಯತೆ ನೀಡಲಿದ್ದು, ಮನೆ ಬಾಗಿಲಿಗೆ ಮದ್ಯ ಪೂರೈಸುವ ಚಿಂತನೆ ನಡೆಸಿದೆ ಎಂದರು.

2018-19ನೇ ಸಾಲಿನಲ್ಲಿ 19,750 ಕೋಟಿ ರು. ಅಬಕಾರಿ ತೆರಿಗೆ ಸಂಗ್ರಹ ಗುರಿ ನಿಗದಿಪಡಿಸಲಾಗಿತ್ತು. ಆದರೆ 19,943.93 ಕೋಟಿ ರು.ಗಳ ಗುರಿ ಸಾಧಿಸಲಾಗಿದೆ. 2019- 20ನೇ ಸಾಲಿನಲ್ಲಿ ವಾರ್ಷಿಕ ಗುರಿ 20,950 ಕೋಟಿ ರು.ಗಳಿದ್ದು, ಆಗಸ್ಟ್ ಅಂತ್ಯಕ್ಕೆ 9099.56 ಕೋಟಿ ರು.ಗಳ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ 569.92 ಲಕ್ಷ ಪೆಟ್ಟಿಗೆ ಭಾರತೀಯ ತಯಾರಿಕಾ ಮದ್ಯ, 300.58 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ.

2019- 20 ನೇ ಸಾಲಿನ ಆಗಸ್ಟ್ ಅಂತ್ಯಕ್ಕೆ 229. 35 ಲಕ್ಷ ಪೆಟ್ಟಿಗೆ ಐಎಂಎಲ್ ಮತ್ತು 119.71 ಲಕ್ಷ ಬಿಯರ್ ಮಾರಾಟವಾಗಿದೆ. ಅಂದರೆ ವಾರ್ಷಿಕ ಶೇ.10 ರಷ್ಟು ಮದ್ಯ ಸೇವಿಸುವವರ ಪ್ರಮಾಣ ಹೆಚ್ಚುತ್ತಿದೆ ಎಂದು ತಿಳಿಸಿದರು.

ಹೊಸ ಪರವಾನಗಿ ಇಲ್ಲ:

ಅಬಕಾರಿ ಇಲಾಖೆ ಹೊಸ ಬಾರ್ ಅಥವಾ ಮದ್ಯದ ಅಂಗಡಿಗಳನ್ನು ತೆರೆಯಲು ಪರವಾನಗಿ ನೀಡುವುದಿಲ್ಲ. ಪ್ರಸ್ತುತ ಈಗ ಇರುವ ಅಂಗಡಿಗಳಲ್ಲೇ ಗುಣಮಟ್ಟದ ಮದ್ಯ ಸಿಗುವಂತೆ ಕ್ರಮಕೈಗೊಳ್ಳಲು ಇಲಾಖೆ ಸಿದ್ಧತೆ ನಡೆಸಿದೆ. ಪಾರ್ಟಿಗಳಲ್ಲಿ ಬೇರೆ ರಾಜ್ಯದಿಂದ ಮದ್ಯ ತಂದು ಉಪಯೋಗಿಸುತ್ತಾರೆ. ಹಾಗಾಗಿ ಅಂತಹ ಪಾರ್ಟಿಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ಮಾಡಲಿದ್ದಾರೆ.

ಗಾಂಜಾ ಮತ್ತು ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತೇವೆ. ಅಕ್ರಮ ಮತ್ತು ಗುಣಮಟ್ಟವಲ್ಲದ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮದ್ಯ ಖರೀದಿಗೆ ಆಧಾರ್ ಕಡ್ಡಾಯವಲ್ಲ:

ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯವಿಲ್ಲ. ಈ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಎಲ್ಲದಕ್ಕೂ ಆಧಾರ್ ಲಿಂಕ್ ಮಾಡಿದರೆ ಮದ್ಯ ಮಾರಾಟ ಮಾಡಲಾಗದೆ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಸಚಿವ ನಾಗೇಶ್ ಹೇಳಿದರು.

ಇದೇ ವೇಳೆ ಇಲಾಖೆಯಲ್ಲಿ ಶೇ.43 ರಷ್ಟು ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಐದು ಅಧೀಕ್ಷಕರು, ೫೯ ಅಬಕಾರಿ ಉಪ ನಿರೀಕ್ಷಕರು ಸೇರಿದಂತೆ 1306 ಹುದ್ದೆಗಳು ಕೆಪಿಎಸ್‌ಸಿಯಲ್ಲಿ ಆಯ್ಕೆ ಹಂತದಲ್ಲಿದ್ದು, ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬಳಿಕ ಒಂದು ವರ್ಷದಲ್ಲಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು. 

"