ಕರ್ನಾಟಕ ಸರ್ಕಾರ ಇದೀಗ ಮಹತ್ವದ ಆದೇಶವೊಂದನ್ನು ಕೈಗೊಂಡಿದೆ. ಖಡಕ್ ಸೂಚನೆಯೊಂದನ್ನು ನೀಡಿದ್ದು ಯಾವ ಲೇವಾದೇವಿದಾರರು ಸಾಳ ಮರು ಪಾವತಿಗೆ ಕಿರುಕುಳ ನೀಡುತ್ತಾರೋ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಬೆಂಗಳೂರು : ಋುಣಭಾರ ಪೀಡಿತ ಸಣ್ಣ ರೈತರು, ದುರ್ಬಲ ವರ್ಗದವರಿಗೆ ಲೇವಾದೇವಿದಾರರು ಸಾಲ ವಸೂಲಿಗಾಗಿ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿ ಸಂಬಂಧಪಟ್ಟಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಎಲ್ಲ ಪ್ರಾದೇಶಿಕ ಆಯುಕ್ತರು, ಎಲ್ಲ ವಲಯಗಳ ಪೊಲೀಸ್ ಮಹಾನಿರೀಕ್ಷಕರು, ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಸುತ್ತೋಲೆ ರವಾನಿಸಿದ್ದಾರೆ.
ರಾಜ್ಯ ಸರ್ಕಾರ ಸಣ್ಣ ರೈತರು, ಕಾರ್ಮಿಕರು ಹಾಗೂ ದುರ್ಬಲ ವರ್ಗದವರು ಖಾಸಗಿ ಲೇವಾದೇವಿದಾರರಿಂದ ಮಾಡಿರುವ ಸಾಲ ಮನ್ನಾ ಮಾಡುವ ಸಂಬಂಧ ಸುಗ್ರೀವಾಜ್ಞೆ ಮಂಡಿಸಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಖಾಸಗಿ ಲೇವಾದೇವಿದಾರರು ಸಾಲ ಪಡೆದುಕೊಂಡವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
‘ಕರ್ನಾಟಕ ಋುಣಭಾರ ಪರಿಹಾರ ಮಸೂದೆ 2018ನ್ನು ರಾಜ್ಯದಲ್ಲಿನ ಋುಣಭಾರ ಪೀಡಿತ ಸಣ್ಣ ರೈತರಿಗೆ ಭೂರಹಿತ ರೈತ ಕೃಷಿ ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗದ ಜನರಿಗೆ ಋುಣಭಾರದ ಸಮಸ್ಯೆಗಳ ಪರಿಹಾರಕ್ಕಾಗಿ ಮಂಡಿಸಲು ಪರಿಶೀಲಿಸಲಾಗುತ್ತಿದೆ. ಈ ಮಾಹಿತಿಯು ರಾಜ್ಯದ ಹಲವಾರು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಋುಣಭಾರ ಪೀಡಿತ ಸಣ್ಣ ರೈತರಿಗೆ, ಭೂರಹಿತ ರೈತ ಕೃಷಿ ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗದ ಜನರಿಗೆ ಸಾಲ ನೀಡಿದ್ದಾರೆನ್ನಲಾದ ಲೇವಾದೇವಿದಾರರಿಂದ ವಿವಿಧ ರೀತಿಯ ಕಾನೂನುಬಾಹಿರ ಒತ್ತಡಗಳು ನಿರ್ಮಾಣವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ, ಕೂಡಲೇ ಈ ಸಾಲ ಪಡೆದವರ ಮೇಲೆ ಯಾವುದೇ ರೀತಿಯ ಕಾನೂನುಬಾಹಿರ ಒತ್ತಡ ಹಾಕದಂತೆ, ದೌರ್ಜನ್ಯ ಎಸಗದಂತೆ ತಡೆಗಟ್ಟಲು ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸುವಂತೆ ಈ ಮೂಲಕ ಸೂಚಿಸಲಾಗಿದೆ’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
