ಬೆಂಗಳೂರು : ಉತ್ತರ ಕರ್ನಾಟಕ ಭಾಗದ ಬಗ್ಗೆ ನಿರ್ಲಕ್ಷ್ಯ ಧೋರ‰ಣೆ ಹೊಂದಲಾಗಿದೆ ಎಂಬ ಪ್ರತಿಪಕ್ಷ ಬಿಜೆಪಿಯ ಆರೋಪಗಳಿಗೆ ಬೆಳಗಾವಿ ಅಧಿವೇಶನದಲ್ಲಿ  ಉತ್ತರ ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸನ್ನದ್ಧರಾಗಿದ್ದು, ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ, ಗಡಿ ವಿವಾದ, ಎಂಇಎಸ್ ಪುಂಡಾಟಿಕೆ ಸೇರಿದಂತೆ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಇಂತಹ ಚಿಂತನೆ ನಡೆಸಿದ್ದಾರೆ. ಅವೇಶನದ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪವಾಗುವ ವಿಷಯಗಳನ್ನು ಗಮನಿಸಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬರ ಪರಿಸ್ಥಿತಿ ಎದುರಾಗಿರುವ ಉತ್ತರ ಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡದಿರುವುದನ್ನು ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ ಪ್ರತಿನಿತ್ಯ ಆರೋಪ ಮಾಡುತ್ತಿದೆ. ಬೆಳಗಾವಿ ಅವೇಶನದಲ್ಲಿಯೂ ಈ ವಿಷಯವನ್ನಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ  ತಂತ್ರಗಾರಿಕೆ ರೂಪಿಸಿದೆ.

ಬಿಜೆಪಿಯ ತಂತ್ರಕ್ಕೆ  ಪ್ರತಿತಂತ್ರ ರೂಪಿಸುವ ಕುಮಾರಸ್ವಾಮಿ, ರಾಜ್ಯ ರಾಜಧಾನಿ ಬೆಂಗಳೂರು ಮಾದರಿಯಲ್ಲಿ ಬೆಳಗಾವಿಯಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದ್ದಾರೆ.  ಉತ್ತರ ಕರ್ನಾಟಕ ಭಾಗಕ್ಕೆ ಭರಪೂರ ಯೋಜನೆಗಳನ್ನು ಪ್ರಕಟಿಸಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿಲ್ಲ ಎಂಬ ಸಂದೇಶ ರವಾನಿಸುವ ಯೋಜನೆ ರೂಪಿಸಿದ್ದಾರೆ ಎಂದು ಹೇಳಲಾಗಿದೆ. ಸಾಂವಿಧಾನಿಕವಾಗಿ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ರೂಪಿಸಲು ಕಾನೂನು ಅಡ್ಡಿಯಾಗಿದೆ. 

ಹೀಗಾಗಿ ಎರಡನೇ ರಾಜಧಾನಿ ಎಂದು ಮಾಡುವ ಬದಲು ರಾಜಧಾನಿ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ತೀರ್ಮಾನ ಮಾಡಿ ಪ್ರತಿಪಕ್ಷಕ್ಕೆ ತಿರುಗೇಟು ನೀಡುವ ಬಗ್ಗೆ ಆಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಳೆದ ಆಗಸ್ಟ್ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯನ್ನು ಎರಡನೇ ರಾಜಧಾನಿ ಮಾಡುವುದಾಗಿ ತೀರ್ಮಾನ ಮಾಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಬಳಿಕ ಕಾನೂನು ತಜ್ಞರು ಮತ್ತು ಕಾನೂನು ಇಲಾಖೆಯೊಂದಿಗೆ ಚರ್ಚಿಸಿದ್ದರು. ಅವರ ಅಭಿಪ್ರಾಯವನ್ನು ಸಂಗ್ರಹಿಸಿದ್ದರು.