ಬೆಂಗಳೂರು :  ರಾಜ್ಯದ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಭರ್ತಿ ಮಾಡುವಾಗ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಶೇ. 50 ರಷ್ಟು ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. 

ಕರ್ನಾಟಕ ರಾಜ್ಯ ಐಸಿಎಸ್‌ಇ ಶಾಲಾ ಕನ್ನಡ ಶಿಕ್ಷಕರ ಸಂಘ ನಗರದ ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 395 ಪ್ರಾಂಶುಪಾಲರು ಹಾಗೂ 3,800 ಉಪನ್ಯಾಸಕರ ಹುದ್ದೆಗಳನ್ನು 3 ತಿಂಗಳೊಳಗೆ ಭರ್ತಿ ಮಾಡಲಾಗುವುದು. ಈ ಸದರ್ಭದಲ್ಲಿ ಕಳೆದ 10 ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಶೇ.50 ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದು ಎಂದರು.

ಉದ್ಯೋಗ ಲಭ್ಯವಾಗುವ ಪಠ್ಯಕ್ರಮ: ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪದವಿ ಉಪನ್ಯಾಸಕರವರೆಗೂ ಆಯಾ ವಿಷಯಗಳ ವಿಷಯ ತಜ್ಞರಿಂದ ತರಬೇತಿ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು. ಬರುವ ಶೈಕ್ಷಣಿಕ ಸಾಲಿನಿಂದ ಪದವಿ ಕಾಲೇಜುಗಳಲ್ಲಿನ ಪಠ್ಯಕ್ರಮಗಳನ್ನು ವಿಷಯ ತಜ್ಞರೊಂದಿಗೆ ಚರ್ಚಿಸಿ ಬದಲಾಯಿಸಲಾಗುವುದು. ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆದುಕೊಳ್ಳಲು ಪೂರಕವಾಗುವ ಪಠ್ಯಕ್ರಮ ಅಳವಡಿಸಲಾಗುವುದು ಎಂದರು.