ಕರ್ನಾಟಕ ಸರ್ಕಾರ ಇದೀಗ ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸಾಲ ಮನ್ನಾ ಯೋಜನೆಯನ್ನು ಮತ್ತಷ್ಟು ವಿಸ್ತರಣೆ ಮಾಡುವ ನಿರ್ಧಾರ ಮಾಡಿದೆ.
ಬೆಂಗಳೂರು : ಪ್ರಸುತ್ತ ಅತಿವೃಷ್ಟಿಹಾಗೂ ಅನಾವೃಷ್ಟಿಗೆ ಸಿಲುಕಿರುವ ನಾಡಿನ ರೈತರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರವು, ಬಹು ನಿರೀಕ್ಷಿತ ಕೃಷಿ ಸಾಲ ಮನ್ನಾ ಯೋಜನೆ ವಿಸ್ತರಣೆ ಹಾಗೂ ಸಾಲ ವಿತರಣೆ ಫಲಾನುಭವಿಗಳ ಹೆಚ್ಚಳ ಸಂಬಂಧ ಎರಡು ಮಹತ್ವದ ನಿರ್ಧಾರವನ್ನು ಸೋಮವಾರ ಪ್ರಕಟಿಸಿದೆ.
1. ಸಾಲ ವಿತರಣೆ ಯೋಜನೆಗೆ ಹೆಚ್ಚುವರಿಯಾಗಿ 15 ಲಕ್ಷ ಫಲಾನುಭವಿಗಳ ಸೇರ್ಪಡೆ.
2. ಒಂದು ಕುಟುಂಬದ ಒಬ್ಬರಿಗೆ ಮಾತ್ರ ಸಾಲ ಮನ್ನಾ ಎಂಬ ನಿಯಮಕ್ಕೆ ತಿದ್ದುಪಡಿ ತಂದು ಒಂದು ಕುಟುಂಬದ ಎಷ್ಟು ಜನರು ಸಾಲ ಮಾಡಿದ್ದರೂ ಮನ್ನಾ.
ವಿಧಾನಸೌಧ ಹಾಗೂ ಜೆಡಿಎಸ್ ಕಚೇರಿಯಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಅವರು, ರಾಜ್ಯದ ಕೆಲವು ಕಡೆ ಅತಿವೃಷ್ಟಿಯಾದರೆ ಮತ್ತೊಂದೆಡೆ ಅನಾವೃಷ್ಟಿಯಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಈಗ ಕಷ್ಟದಲ್ಲಿರುವ ರೈತರಿಗೆ ಸರ್ಕಾರ ನೆರವು ನೀಡಲಿದೆ ಎಂದರು.
ಒಂದು ಕುಟುಂಬದ ಒಬ್ಬರಿಗೆ ಮಾತ್ರ ಕೃಷಿ ಸಾಲ ಮನ್ನಾ ಸೌಲಭ್ಯ ಎಂಬ ನಿಯಮವಿದೆ. ಇದಕ್ಕೆ ತಿದ್ದುಪಡಿ ತಂದು ಕೃಷಿ ಕುಟುಂಬದ ಎಷ್ಟೇ ಸದಸ್ಯರು ಸಾಲ ಪಡೆದಿದ್ದರೂ ಅವರು ಈ ಸಾಲ ಮನ್ನಾ ಫಲಾನುಭವಿಗಳಾಗಲಿದ್ದಾರೆ ಎಂದು ವಿಧಾನಸೌಧದಲ್ಲಿ ಸಚಿವರು ತಿಳಿಸಿದರು.
ಈಗಾಗಲೇ ಸಾಲ ಮನ್ನಾ ಕುರಿತಂತೆ ಆದೇಶ ಹೊರಡಿಸಿದ ಆದೇಶದಲ್ಲಿ ಹಳೆಯ ನಿಯಮ ಉಲ್ಲೇಖವಾಗಿದೆ. ಇದರಿಂದ ಕೆಲವರಿಗೆ ಅಸಮಾಧಾನ ಉಂಟಾಗಿದ್ದು, ಈ ಸಮಸ್ಯೆ ಬಗೆಹರಿಸಲು ಚಿಂತಿಸಲಾಗಿದೆ. ಈ ಸಂಬಂಧ ಶೀಘ್ರದಲ್ಲೇ ಹಳೆ ನಿಯಮ ಕೈಬಿಟ್ಟು ಪರಿಷ್ಕೃತ ಆದೇಶ ಹೊರಡಿಸಲಾಗುತ್ತದೆ. ಅದರಲ್ಲಿ ಕುಟುಂಬದ ಒಬ್ಬರಿಗೆ ಮಾತ್ರ ಎಂಬ ಪದ ತೆಗೆಯಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
15 ಲಕ್ಷ ರೈತರಿಗೆ ಸಾಲ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೊಸದಾಗಿ 15 ಲಕ್ಷ ರೈತರಿಗೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಬಂಡಪ್ಪ ಕಾಶೆಂಪೂರ್ ತಿಳಿಸಿದರು.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೊಸದಾಗಿ 15 ಲಕ್ಷ ರೈತರನ್ನು ಸಾಲದ ವ್ಯಾಪ್ತಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕೆಲವು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಆರ್ಥಿಕ ಕಷ್ಟದಲ್ಲಿವೆ. ಇದನ್ನು ಗಮನದಲ್ಲಿಟ್ಟಿಕೊಂಡು ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿದೆ. ಸಹಕಾರಿ ಸಂಘಗಳ ಮೂಲಕ ಈಗಾಗಲೇ 22 ಲಕ್ಷ ರೈತರು ಸಾಲ ಪಡೆದಿದ್ದು, ಹೊಸದಾಗಿ 15 ಲಕ್ಷ ರೈತರ ವಿಸ್ತರಿಸಲು ಹಣಕಾಸು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕೊಡಗಿನಲ್ಲಿ ಅತಿವೃಷ್ಟಿಯಿಂದ ಭಾರೀ ಅನಾಹುತ ಉಂಟಾಗಿದ್ದು, ರಾಜ್ಯಾದ್ಯಂತ ಸಹಾಯ ಹಸ್ತ ನೀಡಲಾಗುತ್ತದೆ. ನಾವು ಸಹ ನೊಂದವರಿಗೆ ಕೈಲಾದಷ್ಟುನೆರವು ನೀಡುತ್ತೇವೆ ಎಂದು ತಿಳಿಸಿದರು.
