Asianet Suvarna News Asianet Suvarna News

ಆ್ಯಪ್‌ ಮೂಲಕ ರೈತರ ಬೆಳೆ ಸಮೀಕ್ಷೆ : ಸರ್ಕಾರದಿಂದ ನೂತನ ಕ್ರಮ

ಆ್ಯಪ್ ಮೂಲಕ ರೈತರ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಹೊಸ ಕ್ರಮವನ್ನು ಕರ್ನಾಟಕ ಸರ್ಕಾರ ಆರಂಭ ಮಾಡುತ್ತಿದೆ.

Karnataka Govt Decided To Crop Survey From Mobile App
Author
Bengaluru, First Published Jun 29, 2019, 7:25 AM IST

ಬೆಂಗಳೂರು [ಜೂ.29] :  ರಾಜ್ಯದಲ್ಲಿ ರೈತರು ಬೆಳೆವ ಬೆಳೆಗಳ ಬಗ್ಗೆ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಈಗಾಗಲೇ ಅಭಿವೃದ್ಧಿಪಡಿಸಿರುವ ಮೊಬೈಲ್‌ ಆ್ಯಪ್‌ ಮೂಲಕ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಯುವಕ-ಯುವತಿಯರನ್ನು ಬಳಸಿಕೊಂಡು ಸಮೀಕ್ಷೆ ನಡೆಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ 90 ಕೋಟಿ ರು. ವೆಚ್ಚ ತಗಲುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಬರ, ಅತಿವೃಷ್ಟಿಯ ಕುರಿತು ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದಾಗ ವಾಸ್ತವತೆಗೂ ಮತ್ತು ಅಂಕಿ- ಅಂಶಗಳಿಗೂ ಸಾಕಷ್ಟು ವ್ಯತ್ಯಾಸ ಇರುತ್ತಿತ್ತು. ಹೀಗಾಗಿ, ಮೊಬೈಲ್‌ ಆ್ಯಪ್‌ ಮೂಲಕ ನಿಖರವಾಗಿ ಬೆಳೆಯ ಕುರಿತು ಮಾಹಿತಿ ಪಡೆದುಕೊಳ್ಳಲು ಸರ್ಕಾರ ಮುಂದಾಗಿದೆ.

ಒಂದು ಸಮೀಕ್ಷೆಗೆ 10 ರು. ನೀಡಲು ನಿರ್ಧರಿಸಲಾಗಿದ್ದು, ಪ್ರತಿನಿತ್ಯ 50 ಸಮೀಕ್ಷೆ ಮಾಡಲು ಸೂಚನೆ ನೀಡಲಾಗಿದೆ. ಸಮೀಕ್ಷೆಯ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಿಗರಿಗೆ ಒದಗಿಸಬೇಕಾಗುತ್ತದೆ.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಹಲವು ವರ್ಷಗಳ ಹಿಂದೆ ರೈತರು ಯಾವ ಬೆಳೆ ಬೆಳೆಯುತ್ತಾರೆ ಎಂಬುದರ ಬಗ್ಗೆ ಪಹಣಿಯಲ್ಲಿ ಕಡ್ಡಾಯವಾಗಿ ಮಾಹಿತಿ ದಾಖಲು ಮಾಡಲಾಗುತ್ತಿತ್ತು. ಇದರಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯು ಯಾವ ಬೆಳೆ ಎಷ್ಟುಪ್ರಮಾಣದಲ್ಲಿದೆ ಎಂದು ಅಂದಾಜಿಸಲು ಸಾಧ್ಯವಾಗುತ್ತಿತ್ತು. ಆದರೆ, ಕಾಲಕ್ರಮೇಣ ಈ ಪದ್ಧತಿಯು ಸಡಿಲಗೊಂಡಿತು. ಪರಿಣಾಮ ನಿಖರವಾದ ಮಾಹಿತಿ ಲಭ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಅನಾವೃಷ್ಟಿಅಥವಾ ಅತಿವೃಷ್ಟಿಎದುರಾದರೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಬೇಕಾದರೆ ಅಂದಾಜಿನ ಮೇಲೆ ನಡೆಸಿದ ಸಮೀಕ್ಷೆ ಆಧಾರದ ಮೇಲೆ ವಿವರ ಸಲ್ಲಿಕೆ ಮಾಡಬೇಕಾಗಿತ್ತು. ಪರಿಹಾರ ವಿತರಣೆ ಮಾಡುವ ವೇಳೆ ಸಮಸ್ಯೆಯಾಗುತ್ತಿತ್ತು. ರೈತರು ಬೆಳೆದ ಬೆಳೆಯ ಬಗ್ಗೆ ಪ್ರಾಯೋಗಿಕವಾಗಿ ಕೆಲವು ಗ್ರಾಮೀಣ ಭಾಗದಲ್ಲಿ ತುಲನೆ ಮಾಡಿದಾಗ ವಾಸ್ತವತೆಗೂ, ಅಂದಾಜಿಗೂ ಸಾಕಷ್ಟುವ್ಯತ್ಯಾಸ ಕಂಡುಬರುತ್ತಿತ್ತು. ಕನಿಷ್ಠ ಶೇ.40ರಿಂದ ಶೇ.300ರವರೆಗೆ ವ್ಯತ್ಯಾಸ ಇರುತ್ತಿತ್ತು. ಇದನ್ನು ಗಮನಿಸಿ ಕಳೆದ ಎರಡು ವರ್ಷಗಳಿಂದ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. 2017ರಲ್ಲಿ ಪ್ರಾಯೋಗಿಕವಾಗಿ ಪ್ರಯೋಗ ಆರಂಭಿಸಲಾಯಿತು. 2018ರಲ್ಲಿ ಮುಂಗಾರು ಬೆಳೆ ಮಾತ್ರ ಸಮೀಕ್ಷೆ ನಡೆಸಲಾಯಿತು. ಈ ವರ್ಷದಿಂದ ವ್ಯವಸ್ಥಿತವಾಗಿ ರಾಜ್ಯದಲ್ಲಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ 2.20 ಕೋಟಿ ಪ್ಲಾಟ್‌ಗಳಿವೆ. ಯಾವ ಪ್ಲಾಟ್‌ಗಳಲ್ಲಿ ರೈತರು ಯಾವ ಬೆಳೆಯನ್ನು ಬೆಳೆದಿದ್ದಾರೆ ಎಂಬುದರ ಕುರಿತು ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಎಲ್ಲಿ ಬೇಕಾದರೂ ಕುಳಿತುಕೊಂಡು ಆ್ಯಪ್‌ ಮೂಲಕ ಮಾಹಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಆ್ಯಪ್‌ನಲ್ಲಿ ಜಿಪಿಎಸ್‌ ವ್ಯವಸ್ಥೆ ಅಳವಡಿಸಿರುವ ಕಾರಣ ರೈತರ ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸಬೇಕು. ಈ ಉದ್ದೇಶಕ್ಕಾಗಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಯುವಕ/ಯುವತಿಯರನ್ನು ಬಳಸಿಕೊಳ್ಳಲಾಗುವುದು. ಒಂದು ಸಮೀಕ್ಷೆಗೆ 10 ರು. ನೀಡಲಾಗುವುದು. ಪ್ರತಿನಿತ್ಯ 50 ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಇದಕ್ಕಾಗಿ 90 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಗ್ರಾಮ ಲೆಕ್ಕಿಗರ ಮೂಲಕ ಸರ್ಕಾರವು ಸಂಪೂರ್ಣ ವಿವರವನ್ನು ಪಡೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ವಿಮಾ ಕಂತು ಪಾವತಿಗೆ ಸಂಪುಟ ಒಪ್ಪಿಗೆ

ಫಸಲ್‌ ಬಿಮಾ ಯೋಜನೆಯಡಿ ರೈತರ ವಿಮಾ ಕಂತು ಪಾವತಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ 10 ಕ್ಲಸ್ಟರ್‌ ಮಾಡಿ ಟೆಂಡರ್‌ ಕರೆದು ವಿಮಾ ಕಂಪನಿ ಅಂತಿಮಗೊಳಿಸಲಾಗಿದೆ. ಪ್ರತಿ ಕ್ಲಸ್ಟರ್‌ಗೂ ವಿಮೆ ಕಂಪನಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಮುಂಗಾರು, ಹಿಂಗಾರಿನ ಕೆಲವು ಬೆಳೆಗಳಿಗೆ ಶೇ.1.5ರಷ್ಟು, ಇನ್ನು ಕೆಲವು ಬೆಳೆಗಳಿಗೆ ಶೇ.2ರಷ್ಟುಮತ್ತು ವಾಣಿಜ್ಯ ಬೆಳೆಗಳಿಗೆ ಶೇ.5ರಷ್ಟುತಮ್ಮ ಪಾಲಿನ ಕಂತನ್ನು ರೈತರು ಪಾವತಿಸಬೇಕು. ಉಳಿದ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಸಮಾನವಾಗಿ ಪಾವತಿಸಲಿವೆ. ಅಂತೆಯೇ 2019-20ನೇ ಸಾಲಿನ ರಾಜ್ಯ ಸರ್ಕಾರದ ಪಾಲಿನ ಪ್ರೀಮಿಯಂ ಮೊತ್ತ 546.21 ಕೋಟಿ ರು. ಪಾವತಿಸಲು ಸಭೆಯು ಒಪ್ಪಿಗೆ ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಏನಿದು ಯೋಜನೆ?

ರೈತರ ಜಮೀನಿಗೇ ಹೋಗಿ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ನಡೆಸುವುದು. ಇದಕ್ಕಾಗಿ ಎಸ್‌ಎಸ್‌ಎಲ್‌ಸಿ ಪಾಸಾದ ಯುವಕ- ಯುವತಿಯರ ನಿಯೋಜನೆ. ನಿತ್ಯ 50 ಸಮೀಕ್ಷೆ ಮಾಡುವ ಗುರಿ. ಪ್ರತಿ ಸಮೀಕ್ಷೆಗೆ 10 ರು. ಸಂದಾಯ. ಸಮೀಕ್ಷೆ ವಿವರವನ್ನು ಗ್ರಾಮ ಲೆಕ್ಕಿಗರ ಮೂಲಕ ಸರ್ಕಾರ ಪಡೆದುಕೊಳ್ಳುತ್ತದೆ.

ಏನು ಉಪಯೋಗ?

ಯಾವ ಬೆಳೆಯನ್ನು ರೈತರು ಎಷ್ಟುಎಕರೆಯಲ್ಲಿ ಬೆಳೆದಿದ್ದಾರೆ ಎಂಬ ನಿಖರ ಮಾಹಿತಿ ಸರ್ಕಾರಕ್ಕೆ ಸಿಗುತ್ತದೆ. ಬರ, ನೆರೆ ಬಂದು ಬೆಳೆ ನಷ್ಟವಾದಾಗ ಯಾವ ಬೆಳೆ, ಎಷ್ಟುಪ್ರದೇಶದಲ್ಲಿ ನಷ್ಟವಾಗಿದೆ ಎಂಬ ಕರಾರುವಾಕ್ಕು ಮಾಹಿತಿ ಲಭಿಸುತ್ತದೆ. ಪರಿಹಾರ ಕೋರಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು, ಪರಿಹಾರ ಬಂದಾಗ ರೈತರಿಗೆ ಸೂಕ್ತ ರೀತಿಯಲ್ಲಿ ಹಂಚಲು ಅನುಕೂಲ.

Follow Us:
Download App:
  • android
  • ios