ಬೆಂಗಳೂರು(ಆ.09): ಬಿಬಿಎಂಪಿಗೆ ಆಸ್ತಿ ತೆರಿಗೆ ನೀಡದೇ ವಂಚಿಸುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ, ಜಲ ಮಂಡಳಿ ಸೇವೆ ನೀಡುವ ಮುನ್ನ ಆಸ್ತಿ ತೆರಿಗೆ ಪಾವತಿ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಪಡೆದುಕೊಳ್ಳುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಗೆ (ಬೆಸ್ಕಾಂ), ಬೆಂಗಳೂರು ಜಲಮಂಡಳಿಗೆ ಸೂಚನೆ ನೀಡಿದೆ.

ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಪಡೆದರೂ ಆಸ್ತಿ ತೆರಿಗೆ ಪಾವತಿಸದೆ ಇರುವ ಕಾರಣ ಬಿಬಿಎಂಪಿಗೆ ವಾರ್ಷಿಕವಾಗಿ 200 ಕೋಟಿ ರು. ನಷ್ಟವಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷ ನೂರಾರು ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದು, ಆಸ್ತಿ ತೆರಿಗೆ ಸಂಗ್ರಹಣೆ ಮಾತ್ರ ಹೆಚ್ಚಾಗುತ್ತಿಲ್ಲ.

ಈ ಕುರಿತು ಕಳೆದ ಕೆಲ ದಿನಗಳ ಹಿಂದೆ ಮುಖ್ಯ ಕಾರ್ಯದರ್ಶಿಗಳ ಜತೆಗೆ ನಡೆದ ಸಭೆಯಲ್ಲಿ ಬಿಬಿಎಂಪಿ ಆಯುಕ್ತರು ಈ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಇನ್ನು ಮುಂದೆ ಕಟ್ಟಡಗಳ ಒಸಿ ಜತೆಗೆ ಆಸ್ತಿ ತೆರಿಗೆ ಪಾವತಿಸಿದ ದಾಖಲೆ ನೀಡಿದರಷ್ಟೆ ಬೆಸ್ಕಾಂ ಮತ್ತು ಜಲಮಂಡಳಿ ಸೇವೆಗಳನ್ನು ಒದಗಿಸುವಂತೆ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 2017-18ನೇ ಸಾಲಿನಲ್ಲಿ 160 ಕಟ್ಟಡಗಳ 23,232 ಆಸ್ತಿಗಳಿಗೆ (ಫ್ಲ್ಯಾಟ್ಸ್ ) ಒಸಿ ನೀಡಲಾಗಿದೆ. ಆ ಪೈಕಿ ಕೇವಲ 4 ಕಟ್ಟಡಗಳ 761  ಆಸ್ತಿಗಳು ಮಾತ್ರ ತೆರಿಗೆ ಪಾವತಿಸಿವೆ. ಉಳಿದ 156 ಕಟ್ಟಡಗಳ 22,471 ಆಸ್ತಿಗಳು ಈವರೆಗೆ ಒಸಿ ಪಡೆದು ತೆರಿಗೆ ಪಾವತಿಸಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಆಸ್ತಿ ಮಾಲೀಕರು ಒಸಿ ಅಥವಾ ವಿದ್ಯುತ್ ಸಂಪರ್ಕ ಯಾವುದು ಮೊದಲು ಪಡೆಯುತ್ತಾರೆಯೋ ಆ ದಿನಾಂಕದಿಂದಲೇ ಅವರು ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಹಲವು ಕಟ್ಟಡಗಳು ಒಸಿ ಪಡೆದು ನಂತರ ತೆರಿಗೆ ಪಾವತಿಸುತ್ತಿಲ್ಲ. ಇನ್ನು ಮುಂದೆ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಬೇಕೆಂದರೆ ಒಸಿ ಜತೆಗೆ ತೆರಿಗೆ ಪಾವತಿ ರಶೀದಿಯನ್ನು ನೀಡಬೇಕು ಎಂದು ತಿಳಿಸಿದರು.