ಬೆಂಗಳೂರು (ಜೂ.15) :  ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪದವಿ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲೇ ಉಚಿತ ಲ್ಯಾಪ್‌ಟಾಪ್‌ ವಿತರಣೆ ಮಾಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

2016-17ನೇ ಸಾಲಿನಲ್ಲಿ ಕೇವಲ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಮಾಡಿದ್ದ ಹಿಂದಿನ ಸರ್ಕಾರವು 2018-19ನೇ ಸಾಲಿನಿಂದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ‘ಲ್ಯಾಪ್‌ಟಾಪ್‌ ಭಾಗ್ಯ’ ಕಲ್ಪಿಸಲಾಗುವುದು ಎಂದು ಘೋಷಿಸಿತ್ತು. ಆದರೆ, ಮೂರು ವರ್ಷದಿಂದ ಎಸ್‌ಸಿ, ಎಸ್‌ಟಿ ಹಾಗೂ ಸಾಮಾನ್ಯ ವರ್ಗ ಸೇರಿದಂತೆ ಯಾವ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ವಿತರಣೆ ಮಾಡಿಲ್ಲ.

ಇದೀಗ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ-ಅನುದಾನಿತ ಕಾಲೇಜುಗಳ 1,09,916 ವಿದ್ಯಾರ್ಥಿಗಳಿಗೆ 311 ಕೋಟಿ ರು. ವೆಚ್ಚದಲ್ಲಿ ಲ್ಯಾಪ್‌ಟಾಪ್‌ ವಿತರಣೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಾಗಲೇ ಲ್ಯಾಪ್‌ಟಾಪ್‌ ಪೂರೈಕೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಲ್ಯಾಪ್‌ಟಾಪ್‌ ಸರಬರಾಜುದಾರರ ಆಯ್ಕೆಯೂ ಮುಗಿದಿದೆ. ಸದ್ಯದಲ್ಲೇ ಲ್ಯಾಪ್‌ಟಾಪ್‌ ವಿತರಣೆ ಕಾರ್ಯ ಶುರುವಾಗಲಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸೀಮಿತ:

2017-18ನೇ ಸಾಲಿನಿಂದಲೇ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್‌ ವಿತರಿಸಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ, ಮೂರು ವರ್ಷದಿಂದ ವಿತರಣೆ ಮಾಡಿಲ್ಲ. ಹೀಗಾಗಿ ಇದೀಗ 2017-18, 2018-19, 2019-20ನೇ ಸಾಲಿನ ಮೂರು ವರ್ಷದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಲ್ಯಾಪ್‌ಟಾಪ್‌ ವಿತರಣೆ ಮಾಡಬೇಕು. ಆದರೆ, ಪದವಿ ಕಲಿಕೆಗೆ ಪೂರಕವಾಗಿ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ 2018-19 ರಲ್ಲಿ ಪ್ರಥಮ ವರ್ಷದ ಪದವಿಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ (2019-20) ಪ್ರಥಮ ವರ್ಷದ ಪದವಿಯಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್‌ ವಿತರಣೆ ನಡೆಯಲಿದೆ ಎಂದು ಸಚಿವರು ಹೇಳಿದರು.

ಇದರಡಿ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಹಾಗೂ ಇಂಜಿನಿಯರಿಂಗ್‌, ಮೆಡಿಕಲ್‌, ಪಾಲಿಟೆಕ್ನಿಕ್‌ ಡಿಪ್ಲೊಮಾ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ದೊರೆಯಲಿದೆ.

3ನೇ ವರ್ಷದ ವಿದ್ಯಾರ್ಥಿಗಳಿಗಿಲ್ಲ:

2017-18ಕ್ಕೆ ಮೊದಲು ಕೇವಲ ಎಸ್‌ಸಿ,ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಲ್ಯಾಪ್‌ಟಾಪ್‌ ಭಾಗ್ಯವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವಿದ್ಯಾರ್ಥಿಗಳಿಗೂ ವಿಸ್ತರಿಸಿ ಆದೇಶ ಮಾಡಿದ್ದರು. ಈ ಸಂಬಂಧ ವಿಧಾನಸೌಧದಲ್ಲಿ ಅದ್ದೂರಿ ಕಾರ್ಯ ನಡೆಸಿ ಕೆಲ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್‌ನ್ನೂ ವಿತರಿಸಿದರು.

ಆದರೆ, ಬಳಿಕ ಎರಡು ಬಾರಿ ಟೆಂಡರ್‌ ಕರೆದರೂ ಪ್ರಯೋಜನವಾಗಲಿಲ್ಲ. ಬಳಿಕ 2018ರ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಬಂದ ಹಿನ್ನೆಲೆಯಲ್ಲಿ ಪ್ರಸ್ತಾವನೆ ಬದಿಗೆ ಸರಿಯಿತು. ಬಳಿಕ 2018-19ನೇ ಸಾಲಿನಲ್ಲಿ ಅಸ್ವಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರವು ಅನುದಾನ ಕೊರತೆ ಹಿನ್ನೆಲೆಯಲ್ಲಿ ಲ್ಯಾಪ್‌ಟಾಪ್‌ ವಿತರಿಸುವ ಗೋಜಿಗೆ ಹೋಗಿರಲಿಲ್ಲ. ಹೀಗಾಗಿ 2017-18ರಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾಗೂ ಲ್ಯಾಪ್‌ಟಾಪ್‌ ವಿತರಣೆ ಆಸೆ ತೋರಿದ್ದ ವಿದ್ಯಾರ್ಥಿಗಳು ಪ್ರಸ್ತುತ ಮೂರನೇ ವರ್ಷದ ಪದವಿಯಲ್ಲಿದ್ದಾರೆ. ಇವರಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಇನ್ನು ಪ್ರಸ್ತುತ ನಿರ್ಧಾರದಿಂದ ಲ್ಯಾಪ್‌ಟಾಪ್‌ ವಿತರಣೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೂ ನ್ಯಾಯ ಒದಗಿಸಬೇಕು ಎಂದು ಸಚಿವ ಸಂಪುಟದಲ್ಲಿ ಕೆಲವು ಸಚಿವರು ಹೇಳಿದ್ದಾರೆ. ಆದರೆ ಈ ಬಗ್ಗೆ ಪ್ರಸ್ತುತ ಪರಿಗಣಿಸಲು ಹೋದರೆ ಟೆಂಡರ್‌ ಪ್ರಕ್ರಿಯೆ ವಿಳಂಬವಾಗಲಿದೆ. ಹೀಗಾಗಿ ಪ್ರತ್ಯೇಕ ಪ್ರಸ್ತಾವನೆ ಕಳುಹಿಸಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸೂಚಿಸಿದರು ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.