Asianet Suvarna News Asianet Suvarna News

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡ

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಇದೀಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬುಧವಾರ ನಡೆದ ಸರಳ ಸಮಾರಂಭದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ  ಚಿಂಚನಸೂರ್ ಬಿಜೆಪಿ ಸೇರಿದ್ದಾರೆ. 

Karnataka Former Minister Join BJP
Author
Bengaluru, First Published Aug 30, 2018, 10:21 AM IST

ಬೆಂಗಳೂರು :  ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ಕಾಂಗ್ರೆಸ್‌ ತೊರೆದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಬುಧವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಚಿಂಚನಸೂರ್‌ ಅವರನ್ನು ಬರಮಾಡಿಕೊಂಡರು. ಕೇಂದ್ರ ಸಚಿವ ಸಾಧ್ವಿ ನಿರಂಜನ ಜ್ಯೋತಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ ಮೊದಲಾದವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಯಡಿಯೂರಪ್ಪ, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಮತ್ತು ಅವರ ಪತ್ನಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಕಲಬುರಗಿ ಭಾಗದಲ್ಲಿ ಆನೆ ಬಲ ಬಂದಂತಾಗಿದೆ. ಪಕ್ಷದ ಕೋರ್‌ ಕಮಿಟಿಯಲ್ಲಿ ಚರ್ಚಿಸಿ ಬಾಬುರಾವ್‌ ಚಿಂಚನಸೂರ್‌ ಅವರಿಗೆ ಸೂಕ್ತ ಸ್ಥಾನ-ಮಾನ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಅವರ ಸಮಾಜವು ದೊಡ್ಡ ಪ್ರಮಾಣದಲ್ಲಿದ್ದು, ಹೈದ್ರಾಬಾದ್‌-ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂದು ಹೇಳಿದರು.


ಬಾಬುರಾವ್‌ ಚಿಂಚನಸೂರ್‌ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಬಿಜೆಪಿಯಾಗಲಿ, ಜೆಡಿಎಸ್‌ ಆಗಲಿ ಕಾರಣವಲ್ಲ. ಬದಲಿಗೆ ಕಾಂಗ್ರೆಸ್‌ನ ಕುತಂತ್ರದಿಂದ ಮತ್ತು ಜನಬೆಂಬಲ ಸಹಿಸದವರು ನನ್ನನ್ನು ಸೋಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಈವರೆಗೂ ಕೋಲಿ ಸಮಾಜವನ್ನು ಗುರುತಿಸಿಲ್ಲ. ಆದರೆ, ಬಿಜೆಪಿಯಲ್ಲಿ ಕೋಲಿ ಸಮಾಜದಲ್ಲಿ ಉನ್ನತ ಸ್ಥಾನಮಾನ ನೀಡಿದ್ದಾರೆ. ಅಲ್ಲದೇ, ಕೋಲಿ ಸಮಾಜವನ್ನು ಎಸ್‌ಟಿ ವರ್ಗಕ್ಕೆ ಮಾಡಲು ಕೇಂದ್ರ ನಾಯಕರು ಉತ್ಸುಕರಾಗಿದ್ದಾರೆ. ಹೀಗಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.

ಹೈದರಾಬಾದ್‌-ಕರ್ನಾಟಕ ಭಾಗದಲ್ಲಿ ಕೋಲಿ ಸಮಾಜದವರು ಶೇ.40ರಷ್ಟುಮಂದಿ ಇದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆ ಭಾಗದಲ್ಲಿ ಬಿಜೆಪಿಗೆ ಜಯಭೇರಿ ಬಾರಿಸಿಕೊಡುವುದಾಗಿ ಯಡಿಯೂರಪ್ಪ ಅವರಿಗೆ ವಚನ ನೀಡುತ್ತೇನೆ ಎಂದು ಹೇಳಿದರು. ಇದೇ ವೇಳೆ ಬಾಬುರಾವ್‌ ಚಿಂಚನಸೂರ್‌ ಪತ್ನಿ ಅಮರೇಶ್ವರಿ ಕೂಡ ಬಿಜೆಪಿಗೆ ಸೇರ್ಪಡೆಯಾದರು. ಕೇಂದ್ರ ಸಚಿವ ಸಾಧ್ವಿ ನಿರಂಜನ ಜ್ಯೋತಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ ಮೊದಲಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios