ಬೆಂಗಳೂರು [ಜು.24] :  ವಿಧಾನಸಭೆಯಲ್ಲಿ ನಡೆದ ಕಾರ್ಯಕಲಾಪ ಪ್ರಜಾಪ್ರಭುತ್ವದ ಗೆಲುವು ಎಂದು ಪ್ರತಿಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಲು ವಿಫಲವಾದ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಹದಿನಾಲ್ಕು ತಿಂಗಳ ಆಡಳಿತದಿಂದ ಜನ ಬೇಸತ್ತಿದ್ದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಜನತೆಗೆ ಉತ್ತಮ ಆಡಳಿತ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಕಳೆದ ಎರಡ್ಮೂರು ತಿಂಗಳಿಂದ ರೈತರು ಮಳೆ ಇಲ್ಲದೆ ಬರಗಾಲಕ್ಕೆ ಸಿಕ್ಕಿ ತತ್ತರಿಸಿದ್ದಾರೆ. ಜನ ಗುಳೆ ಹೋಗುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ರೈತ ನನ್ನ ಮೊದಲ ಆದ್ಯತೆ. ರೈತರಿಗೆ ಹೆಚ್ಚು ಶ್ರಮಿಸಲಾಗುವುದು ಎಂದು ತಿಳಿಸಿದರು.

ಪಕ್ಷದ ಹಿರಿಯ ಮುಖಂಡ ಹಾಗೂ ಶಾಸಕ ಆರ್‌.ಅಶೋಕ್‌ ಮಾತನಾಡಿ, ಕಳೆದ ಹದಿನೈದು ದಿನಗಳಿಂದ ಬಹುಮತ ಇಲ್ಲದಿದ್ದರೂ ಕುಮಾರಸ್ವಾಮಿ ಅವರು ಕುರ್ಚಿಗೆ ಅಂಟಿಕೊಂಡಿದ್ದರು. ಇದೀಗ ರಾಜ್ಯದಲ್ಲಿ ದುರಾಡಳಿ, ರಕ್ಷಸ ರಾಜ್ಯ ಅಂತ್ಯಗೊಂಡಿದೆ ಎಂದು ಹೇಳಿದರು,

ಸಮ್ಮಿಶ್ರ ಸರ್ಕಾರ ಪತನವಾಗಲು ಮೈತ್ರಿ ಪಕ್ಷಗಳೇ ಕಾರಣ. ಸಮ್ಮಿಶ್ರ ಸರ್ಕಾರ ಪತನವಾಗುವ ಮೂಲಕ ರಾಜ್ಯಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಲಿದೆ. ಬುಧವಾರ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತೇವೆ. ನಂತರ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆ ಮಾಡುವ ಹಕ್ಕು ಮಂಡಿಸಲಾಗುವುದು. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಲಿದ್ದೇವೆ ಎಂದು ತಿಳಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ರಾಜೀನಾಮೆ ನೀಡಿರುವವರು ಇನ್ನು ಕೂಡ ಕಾಂಗ್ರೆಸ್‌ನಲ್ಲಿಯೇ ಇದ್ದಾರೆ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಇನ್ನು ಬಿಜೆಪಿ ಮಿಷನ್‌ ಯಶಸ್ವಿಯಾಗಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.