ಹುಬ್ಬಳ್ಳಿ[ಆ.11]: ರಾಜ್ಯ ಸರ್ಕಾರದ್ದು ಒನ್‌ ಮ್ಯಾನ್‌ ಶೋ ಆಗಿದೆ. ರಾಜ್ಯದಲ್ಲಿ ರಣಭೀಕರ ಪ್ರವಾಹ ಎದುರಾಗಿದೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿ 15 ದಿನಗಳೇ ಕಳೆದರೂ ಈವರೆಗೂ ಸಂಪುಟ ಮಾತ್ರ ರಚನೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈವರೆಗೂ ಸಂಪುಟ ರಚನೆ ಮಾಡದಿರುವುದರಿಂದ ಒನ್‌ ಮ್ಯಾನ್‌ ಶೋ ಎಂಬಂತೆ ಯಡಿಯೂರಪ್ಪ ಒಬ್ಬರೇ ಸುತ್ತಾಡುತ್ತಿದ್ದಾರೆ ಎಂದರು.

ನೆರೆ ಪರಿಹಾರ ಅಷ್ಟೇ ಅಲ್ಲದೇ, ರಾಜ್ಯದಲ್ಲಿ ಯಾವೊಂದು ಕೆಲಸಗಳು ಆಗುತ್ತಿಲ್ಲ. ವಿಧಾನಸೌಧ ಭಣಗುಡುತ್ತಿದೆ. ಬಿಜೆಪಿ ಯಾಕೆ ಸಂಪುಟ ರಚನೆ ಮಾಡುತ್ತಿಲ್ಲ ಎಂಬುದು ಗೊತ್ತಿಲ್ಲ. ಬಹುಶಃ ಅತೃಪ್ತ ಶಾಸಕರಿಗಾಗಿ ಕಾಯುತ್ತಿದ್ದಾರೋ ಏನೋ ಗೊತ್ತಿಲ್ಲ ಎಂದರು. ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅನುಯಾಯಿಗಳು ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಬರೀ ವರ್ಗಾವಣೆ ದಂಧೆಯಿಂದ ಲೂಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದು ಸಮರ್ಥಿಸಿಕೊಂಡ ದಿನೇಶ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಸರಿಯಿರಲ್ಲಿ. ಹೀಗಾಗಿ ಅವರು ಬಾದಾಮಿಗೆ ಹೋಗಿರಲಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಅವರ್ನು ಸಮರ್ಥಿಸಿಕೊಂಡರು. ಕೆಪಿಸಿಸಿಯಿಂದ ಎರಡು ತಂಡಗಳನ್ನು ರಚಿಸಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿವೆ. ನಿರಾಶ್ರಿತರಿಗೆ ನೆರವಿನ ಹಸ್ತ ಚಾಚುತ್ತಿವೆ ಎಂದರು.