ಕರ್ನಾಟಕ ಪ್ರವಾಹ: ರಕ್ಷಣೆಗೆ ಬಂದ ಹೆಲಿಕಾಪ್ಟರನ್ನೇ ರಕ್ಷಿಸಿದ ಜನ
ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಸಾಮಗ್ರಿ ಹೊತ್ತುಕೊಂಡು ತೆರಳುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಕೆಟ್ಟು ನಿಂತಿದ್ದು ಜನರು ನೆರವಿಗೆ ಬಂದ ಘಟನೆ ಬಳ್ಳಾರಿಯಲ್ಲಿ ನಡೆಯಿತು.
ಬಳ್ಳಾರಿ [ಆ.09]: ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಸಾಮಗ್ರಿ ಹೊತ್ತುಕೊಂಡು ತೆರಳುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ (ಝೆಡ್‌ಎ 355) ಕುರುಗೋಡು ತಾಲೂಕಿನ ಏಳುಬೆಂಚೆ ಗ್ರಾಮದ ಬಳಿ ಜಮೀನಿನಲ್ಲಿ ಗುರುವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ.
ನಂತರ ತಾಂತ್ರಿಕ ಸಮಸ್ಯೆ ಸರಿಪಡಿಸಿ, ಪೊಲೀಸರ ನೆರವಿನಿಂದ ಇಂಧನ ತುಂಬಿಸಿ ಬೆಳಗಾವಿಗೆ ಕಳುಹಿಸಿಕೊಡಲಾಯಿತು. ಇದಕ್ಕೂ ಮೊದಲು ಗ್ರಾಮಸ್ಥರೆಲ್ಲ ಸೇರಿ ಕಾಪ್ಟರ್ ಅನ್ನು ಒಂದಷ್ಟುದೂರ ತಳ್ಳಿಕೊಂಡು ಹೋಗುವ ಮೂಲಕ ಸಮತಟ್ಟಾದ ಸ್ಥಳಕ್ಕೆ ತಂದು ನಿಲ್ಲಿಸಿದರು. ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಾಯುಪಡೆಗೆ ಸೇರಿದ ಈ ಹೆಲಿಕಾಪ್ಟರ್ ಹೈದರಾಬಾದ್‌ನಿಂದ ಬೆಳಗಾವಿಗೆ ತೆರಳುತ್ತಿತ್ತು. ಆದರೆ, ಮಾರ್ಗ ಮಧ್ಯೆ ದಿಢೀರ್ ತಾಂತ್ರಿಕ ಸಮಸ್ಯೆಕಾಣಸಿಕೊಂಡ ಹಿನ್ನೆಲೆಯಲ್ಲಿ ಕಾಪ್ಟರ್ ರೈತರ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಕಾಪ್ಟರ್ ಹೊಲದಲ್ಲಿ ಇಳಿದದ್ದನ್ನು ನೋಡುತ್ತಿದ್ದಂತೆ ಗ್ರಾಮಸ್ಥರು ಕುತೂಹಲದಿಂದ ಸ್ಥಳಕ್ಕೆ ಓಡಿ ಬಂದರು.
ಆಗ ಅಲ್ಲಿಗೆ ಆಗಮಿಸಿದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಮೊದಲಿಗೆ ಕಾಪ್ಟರ್ ಬಳಿ ಯಾರೂ ಹೋಗದಂತೆ ತಡೆಯೊಡ್ಡಿದ ಪೊಲೀಸರು, ನಂತರ ಜಮೀನಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕಾಪ್ಟರ್‌ನ್ನು ಸೂಕ್ತ ಜಾಗದಲ್ಲಿ ನಿಲ್ಲಿಸಲು ಸಾರ್ವಜನಿಕರ ನೆರವು ಕೋರಿದರು. ಅದರಂತೆ ನೆರಿದ್ದವರೆಲ್ಲ ಸೇರಿ ಕಾಪ್ಟರ್ ಅನ್ನು ತುಸುದೂರ ತಳ್ಳುವ ಮೂಲಕ ಸಮತಟ್ಟಾದ ಜಾಗದಲ್ಲಿ ನಿಲ್ಲಿಸಿದರು.