ಬೆಂಗಳೂರು [ಆ.11]:  ಕೊಡಗು ಸೇರಿದಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ 15 ದಿನಗಳಿಂದ ಸುರಿಯುತ್ತಿರುವ ಮಹಾಮಳೆ ಶನಿವಾರ ಕೊಂಚ ತಗ್ಗಿದ್ದರೂ ಪ್ರವಾಹ ಮತ್ತು ಭೂಕುಸಿತದ ಪ್ರಮಾಣ ಹೆಚ್ಚುತ್ತಲೇ ಇದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸಂಬಂಧಿ ಕಾರಣಗಳಿಗೆ ಒಟ್ಟು ನಾಲ್ವರು ಮೃತಪಟ್ಟಪ್ರತ್ಯೇಕ ಘಟನೆಗಳು ವರದಿಯಾಗಿವೆ. ಈ ನಡುವೆ ಭೂಕುಸಿತದಿಂದಾಗಿ ಬೆಟ್ಟಗುಡ್ಡಗಳ ನಡುವೆ ಸಿಲುಕಿಕೊಂಡ ಜನರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ.

ಕೊಡಗು ಜಿಲ್ಲೆಯಲ್ಲಿ ಕಾವೇರಿ, ಲಕ್ಷ್ಮಣತೀರ್ಥ ನದಿ ಮತ್ತು ಹತ್ತಾರು ಹೊಳೆಗಳಲ್ಲಿ ಪ್ರವಾಹ ಉಂಟಾಗಿ ಈ ವ್ಯಾಪ್ತಿಯಲ್ಲಿ ಸುಮಾರು 58 ಪ್ರದೇಶ ಪ್ರವಾಹಕ್ಕೆ ತುತ್ತಾಗಿದೆ. ಇದೇವೇಳೆ ಭಾಗಮಂಡಲದಲ್ಲಿ ನಿರಂತರ ಐದನೇ ದಿನ ಈ ಪ್ರದೇಶ ಮುಳುಗಡೆಯಾಗಿದೆ. ಶುಕ್ರವಾರ ಭಾರಿ ಪ್ರಮಾಣದಲ್ಲಿ ಪ್ರವಾಹ ಉಂಟಾಗಿ ಶ್ರೀ ಭಗಂಡೇಶ್ವರ ದೇವಾಲಯದ ಒಳಗೆ ಕಾವೇರಿ ನದಿ ನೀರು ಆವರಿಸಿತ್ತು. ಶನಿವಾರ ಮಳೆ ಕಡಿಮೆಯಾಗಿ ಪ್ರವಾಹ ಕೊಂಚ ಇಳಿಮುಖವಾಗಿದೆ. ಪಟ್ಟಣದ ಹಲವು ಮನೆಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದ್ದು, ಕೆಲವು ಮನೆಗಳಿಗೆ ಹಾನಿ ಸಂಭವಿಸಿದೆ. ಸಂತ್ರಸ್ತರನ್ನು ಸಾಗಿಸಲು ರಾರ‍ಯಫ್ಟಿಂಗ್‌ ಬಳಸಲಾಗುತ್ತಿದೆ.

ವಿರಾಜಪೇಟೆ ತಾಲೂಕಿನ ಕೊಂಡಂಗೇರಿಯಲ್ಲಿ ಪ್ರವಾಹಕ್ಕೆ 100ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, 20ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಶುಕ್ರವಾರದಂದು ವಿರಾಜಪೇಟೆಯ ತೋರ ಗ್ರಾಮದಲ್ಲಿ ಕಣ್ಮರೆಯಾಗಿದ್ದ 8 ಮಂದಿಗಾಗಿ ಶನಿವಾರವೂ ಶೋಧ ಮುಂದುವರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಳಸದಲ್ಲಿ ಭೂಕುಸಿತದಿಂದಾಗಿ ಹಲವು ಗ್ರಾಮಗಳು ಮತ್ತು ರಸ್ತೆ ಸಂಪರ್ಕ ಕಡಿದು ಹೋಗಿವೆ. ಬೆಟ್ಟಗುಡ್ಡಗಳ ನಡುವೆ ಸಿಕ್ಕಿ ಹಾಕಿಕೊಂಡಿರುವ ಜನರನ್ನು ಕರೆ ತರೆಯಲು 34 ಸದಸ್ಯರ ಭೂ ಸೇನಾ ತಂಡ ಶನಿವಾರ ಜಿಲ್ಲೆಗೆ ಆಗಮಿಸಿದ್ದು, ಭಾನುವಾರ ಕಾರ್ಯಾಚರಣೆಯನ್ನು ಆರಂಭಿಸಲಿದ್ದಾರೆ. ಮಲೆನಾಡಿನ ಹಲವೆಡೆ ರಸ್ತೆ, ವಿದ್ಯುತ್‌ ಸಂಪರ್ಕ ಕಡಿದು ಹೋಗಿದೆ. ಮೂಡಿಗೆರೆ ತಾಲೂಕಿನ ಮದುಗುಂಡಿ ಬಳಿ ಸುಮಾರು 10 ಕುಟುಂಬಗಳು ಸಿಲುಕಿಕೊಂಡಿದ್ದಾರೆ. ಅಲ್ಲಿಂದ ಜನರನ್ನು ಕರೆ ತರಲು ಮಳೆ ಅಡ್ಡಿಯಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಲ್ಪ ವಿರಾಮ ನೀಡಿದ್ದರೂ ಶರಾವತಿ, ತುಂಗಾ, ಭದ್ರಾ, ವರದಾ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಒಟ್ಟಾರೆ 10 ಗ್ರಾಮಗಳು ಜಲಾವೃತಗೊಂಡಿದ್ದು, 12,130 ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿ ಮುಳುಗಡೆಯಾಗಿದೆ. 740 ಮಂದಿಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, 17 ಪರಿಹಾರ ಕೇಂದ್ರ ಸ್ಥಾಪಿಸಿ 2150 ಮಂದಿ ಸಂತ್ರಸ್ಥರಿಗೆ ಆಶ್ರಯ ಒದಗಿಸಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಪ್ರವಾಹ ಭೀತಿ ಎಂದಿನಂತೆ ಮುಂದುವರಿದಿದ್ದು, ಪಟ್ಟಣದ ಅನೇಕ ಬಡಾವಣೆಗಳು ಜಲಾವೃತಗೊಂಡಿವೆ. ಸಕಲೇಶಪುರದಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿರುವುದರಿಂದ ಇಲ್ಲಿರುವ ಶ್ರೀಹೊಳೆಮಲ್ಲೇಶ್ವರ ಸ್ವಾಮಿ ದೇವಾಲಯ ಸತತ 5 ದಿನವೂ ನೀರಿನಲ್ಲಿ ಮುಳುಗಿದೆ. ಅಲ್ಲಲ್ಲಿ ಗುಡ್ಡ ಕುಸಿತ ಪರಿಣಾಮ ಶಿರಾಡಿ ಘಾಟ್‌ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಸಂಚಾರ ಬಂದ್‌ ಮಾಡಲಾಗಿರುವುದರಿಂದ ವಾಹನ ಸವಾರರ ಪರದಾಟ ಮುಂದುವರಿದಿದೆ.