ಮೂಡಲಗಿ[ಆ.12]: ಘಟಪ್ರಭಾ ಪ್ರವಾಹ ಬಂದು ಜನರ ಬದುಕು ಬೀದಿಗೆ ಬಿದ್ದಿರುವ ಈ ವೇಳೆ ಲಕ್ಷಾಂತರ ಮಂದಿ ಆಹಾರ, ಬಟ್ಟೆ, ನೀರು ಇಲ್ಲದೇ ನರಳುತ್ತಿದ್ದಾರೆ. ಜೊತೆಗೆ ಜಾನುವಾರುಗಳೂ ಸಂತ್ರಸ್ತವಾಗಿದ್ದು ಮೇವು ಸಿಗದೇ ಪರದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ ರೈತ ತನ್ನ ಹೊಲದಲ್ಲಿ ಬೆಳೆದಿದ್ದ ಒಂದು ಎಕರೆ ಕಬ್ಬನ್ನು ಕಟಾವು ಮಾಡಿ ಸಂತ್ರಸ್ತರ ಜಾನುವಾರುಗಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದ ಪ್ರಗತಿಪರ ಭೀಮಪ್ಪ ಹಣಮಂತಪ್ಪಾ ರಡ್ಡಿ ಅವರೇ ಇಂತಹ ಮಾನವೀಯ ಕಾರ್ಯ ಮಾಡಿದರು. ಅಂದಾಜು ಈ ಕಬ್ಬಿನ ಮೇವಿನ ಬೆಲೆಯೇ .1.5 ಲಕ್ಷ ಆಗುತ್ತದೆ. ಅವರ ಈ ಕಾರ್ಯ ಮೆಚ್ಚಿ ತಹಸೀಲ್ದಾರ್‌ ಮುರಳೀಧರ ತಳ್ಳಿಕೇರಿ ಸಂಘ ಸಂಸ್ಥೆಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಕಮದಿನ್ನಿಯತ್ತ ರೈತರು :

ಭೀಮಪ್ಪ ಅವರಿಗೆ ಸಾಕಷ್ಟುಜಮೀನಿದ್ದು ಕಬ್ಬನ್ನೇ ಬೆಳೆದಿದ್ದಾರೆ. ಇದೀಗ ಪ್ರವಾಹದಿಂದಾಗಿ ಮೇವಿನ ಕೊರತೆ ಇರುವುದರಿಂದ ಜಾನುವಾರುಗಳ ಪರಿಸ್ಥಿತಿ ಏನು ಎಂದರಿತು ಸದ್ಯ ಒಂದು ಎಕರೆ ಹೊಲದಲ್ಲಿನ ಕಬ್ಬಿನ ಮೇವನ್ನು ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಪರಿಹಾರ ಕೇಂದ್ರದಲ್ಲಿರುವ ರೈತರು ಕೂಡ ಕಮಲದಿನ್ನಿ ಗ್ರಾಮಕ್ಕೆ ಹೋಗಿ ಜಾನುವಾರುಗಳಿಗೆ ಮೇವನ್ನು ತೆಗೆದುಕೊಂಡು ಬರುತ್ತಿದ್ದಾರೆ. ಸಂತ್ರಸ್ತ ಜಾನುವಾರುಗಳಿಗೆ ಒಂದು ಎಕರೆಯಲ್ಲಿನ ಕಬ್ಬಿನ ಮೇವು ಸಾಕಾಗದಿದ್ದರೆ ಇನ್ನೂ ಒಂದು ಎಕರೆಯ ಕಬ್ಬನ್ನು ದಾನ ಮಾಡುವುದಾಗಿ ರೈತ ಭೀಮಪ್ಪ ಹೇಳುತ್ತಾರೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

1.5 ಲಕ್ಷದ ಮೌಲ್ಯದ ಕಬ್ಬು:

ಮೂಡಲಗಿ ತಾಲೂಕಾಡಳಿತವು .2000ದಂತೆ 1 ಟನ್‌ ಮೇವು ಖರೀದಿಸಲು ಮುಂದಾಗಿತ್ತು. ಮಾತ್ರವಲ್ಲ ಹಣ ಇದ್ದ ರೈತರು .2700 ರಿಂದ .3000 ಪ್ರತಿ ಟನ್‌ ಮೇವಿಗೆ ಹಣ ಕೇಳುತ್ತಿದ್ದಾರೆ. ಆದರೆ ರೈತ ಭೀಮಪ್ಪ ಹಣದ ಹಿಂದೆ ಹೋಗದೆ ಸಂತ್ರಸ್ತ ಜಾನುವಾರುಗಳಿಗೆ ಉಚಿತವಾಗಿ ಮೇವು ನೀಡುತ್ತಿದ್ದಾರೆ. ಅಂದಾಜು ಈ ಕಬ್ಬಿನ ಮೇವಿನ ಬೆಲೆಯೇ .1.5 ಲಕ್ಷ ಆಗುತ್ತದೆ. ಅವರ ಈ ಕಾರ್ಯ ಮೆಚ್ಚಿ ತಹಸೀಲ್ದಾರ್‌ ಮುರಳೀಧರ ತಳ್ಳಿಕೇರಿ ಸಂಘ ಸಂಸ್ಥೆಗಳು ಕೃತಜ್ಞತೆ ಸಲ್ಲಿಸಿದ್ದಾರೆ.