Asianet Suvarna News Asianet Suvarna News

ಹಳದಿ-ಕೆಂಪು ಜತೆ ಕರ್ನಾಟಕ ಲಾಂಛನ ಇರುವ ರಾಜ್ಯಧ್ವಜ?

ಕರ್ನಾಟಕದ ಪ್ರತ್ಯೇಕ ನಾಡ ಧ್ವಜ ಕುರಿತ ಶಿಫಾರಸು ಮಾಡಲು ನೇಮಕಗೊಂಡಿರುವ ಧ್ವಜ ಸಮಿತಿ ವಿನ್ಯಾಸ ಸಹಿತ ತನ್ನ ವರದಿ ಸಲ್ಲಿಸುವ ದಿನ ಸಮೀಪಿಸುತ್ತಿರುವಂತೆಯೇ ನಾಡಿನ ಹೊಸ ಧ್ವಜ ಯಾವುದಿರಬಹುದು ಎಂಬ ಕುತೂಹಲ ತೀವ್ರವಾಗುತ್ತಿದೆ.

Karnataka Flag

ಬೆಂಗಳೂರು (ಜ.21): ಕರ್ನಾಟಕದ ಪ್ರತ್ಯೇಕ ನಾಡ ಧ್ವಜ ಕುರಿತ ಶಿಫಾರಸು ಮಾಡಲು ನೇಮಕಗೊಂಡಿರುವ ಧ್ವಜ ಸಮಿತಿ ವಿನ್ಯಾಸ ಸಹಿತ ತನ್ನ ವರದಿ ಸಲ್ಲಿಸುವ ದಿನ ಸಮೀಪಿಸುತ್ತಿರುವಂತೆಯೇ ನಾಡಿನ ಹೊಸ ಧ್ವಜ ಯಾವುದಿರಬಹುದು ಎಂಬ ಕುತೂಹಲ ತೀವ್ರವಾಗುತ್ತಿದೆ.

ಮೂಲಗಳ ಪ್ರಕಾರ ಪರಿಗಣನೆಯಲ್ಲಿರುವ ಹಲವು ವಿನ್ಯಾಸಗಳ ಪೈಕಿ ತ್ರಿವರ್ಣ (ಕೆಂಪು-ಬಿಳಿ-ಹಳದಿ) ಬಳಸಿರುವ ವಿನ್ಯಾಸವೇ ಸರ್ಕಾರಕ್ಕೆ ಶಿಫಾರಸು ಮಾಡಲು ಪರಿಗಣನೆ ಆಗಲಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಈ ಮೂರು ಬಣ್ಣಗಳ ಧ್ವಜವನ್ನು ಕರುನಾಡ ಧ್ವಜವಾಗಿ ಒಪ್ಪಲು ಸಾಧ್ಯವಿಲ್ಲ. ಹಾಲಿ ಇರುವ  ಧ್ವಜದಲ್ಲಿ ಕೂದಲೆಳೆಯಷ್ಟು ಬದಲಾದರೂ ರಕ್ತಪಾತವಾಗುತ್ತದೆ  ಎಂದು ಕನ್ನಡ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾದ  ಹಿನ್ನೆಲೆಯಲ್ಲಿ ಈ ವಿನ್ಯಾಸವನ್ನು ಸರ್ಕಾರ ಪರಿಗಣಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಕನ್ನಡ ಧ್ವಜದ ಮೂಲ ಸ್ವರೂಪವನ್ನೇ  ಕಾಯ್ದಿಟ್ಟುಕೊಂಡು ಅದರಲ್ಲಿ ಕೊಂಚ ಬದಲಾವಣೆ ಹೊಂದಿರುವ  ಮತ್ತೊಂದು ವಿನ್ಯಾಸದ ಧ್ವಜ ಕರುನಾಡಿನ ಪ್ರತ್ಯೇಕ ಧ್ವಜವಾಗುವ  ಸಾಧ್ಯತೆ ಇದೆ ಎಂದು ಈ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಕನ್ನಡ ಹೋರಾಟಗಾರ ಮ. ರಾಮಮೂರ್ತಿ ಅವರು  ಚಾಲನೆಗೆ ತಂದ ಹಳದಿ ಹಾಗೂ ಕೆಂಪು ಧ್ವಜದ ಸ್ವರೂಪವನ್ನು  ಅದು ಇರುವಂತೆಯೇ ಕಾಯ್ದುಕೊಳ್ಳಲಾಗಿದೆ. ಇದರಲ್ಲಿ ಹಳದಿ  ಭಾಗದಲ್ಲಿ ರಾಜ್ಯ ಲಾಂಛನವಾದ ಗಂಡ ಭೇರುಂಡವನ್ನು  ಅಳವಡಿಸುವುದು ಹಾಗೂ ಅದರ ಕೆಳಗೆ ಸತ್ಯಮೇವ ಜಯತೇ ಎಂಬ ವಾಕ್ಯವನ್ನು ಕನ್ನಡದಲ್ಲಿ ಬರೆದಿರಲಾಗಿರುತ್ತದೆ. ಪ್ರಸ್ತುತ ಲಾಂಛನದಲ್ಲಿ ಸತ್ಯಮೇವ ಜಯತೇ ಎಂಬ ವಾಕ್ಯ ಬ್ರಾಹ್ಮಿ  ಲಿಪಿಯಲ್ಲಿದೆ. ಅದನ್ನು ಕನ್ನಡಕ್ಕೆ ಬದಲಾಯಿಸಿ ಬಾವುಟದ ಹಳದಿ ಭಾಗದಲ್ಲಿ ಅಳವಡಿಸಿರುವ ವಿನ್ಯಾಸ ಸಮಿತಿಯ ಬಹುತೇಕ ಸದಸ್ಯರಿಗೆ ಒಪ್ಪಿಗೆಯಾಗಿದ್ದು, ಅದನ್ನು ಸರ್ಕಾರಕ್ಕೆ ಶಿಫಾರಸು ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

 

Follow Us:
Download App:
  • android
  • ios