ಬೆಳಗಾವಿ (ಆ. 24): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಚೆಗೆ ತ್ರಿವಳಿ ತಲಾಖ್‌ ನಿಷೇಧ ಕಾಯ್ದೆ ಜಾರಿಗೆ ಮಾಡಿದ ಬಳಿಕ ಇದೀಗ ರಾಜ್ಯದಲ್ಲೇ ಪ್ರಥಮ ತ್ರಿವಳಿ ತಲಾಖ್‌ ಪ್ರಕರಣ ಬೆಳಗಾವಿ ಜಿಲ್ಲೆಯ ಸವದತ್ತಿ ಠಾಣೆಯಲ್ಲಿ ದಾಖಲಾಗಿದೆ.

ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬೀಬಿ ಆಯೀಶಾ(23) ತನ್ನ ಪತಿ ಇಸ್ಮಾಯಿಲ್‌ ಖಾನ ಪಠಾಣ ವಿರುದ್ಧ ಈ ಬಗ್ಗೆ ದೂರು ನೀಡಿದ್ದು, ತನ್ನ ಪತಿಯನ್ನು ತ್ರಿವಳಿ ತಲಾಖ್‌ ನಿಷೇಧ ಕಾಯ್ದೆಯಡಿ ಬಂಧಿಸಲು ಆಗ್ರಹಿಸಿದ್ದಾರೆ.

ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ!

ತ್ರಿವಳಿ ತಲಾಖ್‌ ಕುರಿತು ಕೇಂದ್ರ ಸರ್ಕಾರ ಜು.31ರಂದು ಗೆಜೆಟ್‌ ಹೊರಡಿಸಿತ್ತು. ಅದರಡಿ ಆರೋಪಿತ ಇಸ್ಮಾಯಿಲ್‌ ಖಾನ್‌ ಮೇಲೆ ಮುಸ್ಲಿಂ ವುಮೆನ್‌ ಪ್ರೊಟೆಕ್ಷನ್‌ ಆಫ್‌ ರೈಟ್ಸ್‌ ಆಫ್‌ ಮ್ಯಾರೇಜ್‌ ಆ್ಯಕ್ಟ್ 2019 ಸೆಕ್ಷನ್‌ 4ರಡಿ ಸವದತ್ತಿ ಠಾಣೆ ಎಸ್‌ಐ ಪರಶುರಾಮ ಎಸ್‌.ಪೂಜಾರ ಪ್ರಕರಣ ದಾಖಲಿಸಿದ್ದಾರೆ.

ಏನಿದು ಘಟನೆ?:

ಗೋವಾ ಮೂಲದ ಇಸ್ಮಾಯಿಲ್‌ಖಾನ ಜೊತೆ ತಾಲೂಕಿನ ಯಕ್ಕುಂಡಿ ಗ್ರಾಮದ ಆಯೀಶಾ ನಸ್ರೀನ ಅವರ ಮದುವೆ 2017ರ ಜ.2ರಂದು ನಡೆದಿತ್ತು. ಕಳೆದ ವರ್ಷ ಆಯೀಶಾಗೆ ಕಾಯಿಲೆ ಇದೆ ಎಂದು ಇಸ್ಮಾಯಿಲ್‌ ಸುಳ್ಳು ಹೇಳಿ ತವರು ಮನೆಗೆ ಕಳುಹಿಸಿದ್ದ. ಆಯೀಶಾ ತವರು ಮನೆಯಲ್ಲಿ ನಾಲ್ಕಾರು ವೈದ್ಯರಿಗೆ ತೋರಿಸಿದರೂ ಯಾವ ಕಾಯಿಲೆಯೂ ಇಲ್ಲದ್ದನ್ನು ದೃಢಪಡಿಸಿಕೊಂಡು ಪತಿಗೆ ತಿಳಿಸಿದ್ದಾರೆ.

ಆಗ ಅದನ್ನು ನಿರಾಕರಿಸಿದ ಪತಿ 2019ರ ಫೆ.22ರಂದೇ ಅಂಚೆ ಮೂಲಕ ಮೊದಲ ಬಾರಿ ತಲಾಖ್‌ ಏ ಬೈನ್‌ ಕಳುಹಿಸಿದ್ದಾನೆ. ನಂತರ ಮಾಚ್‌ರ್‍ನಲ್ಲಿ ಎರಡನೇ ಸಲ ಮತ್ತು ಮೇ 5ರಂದು ಮೂರನೇ ಬಾರಿ ತಲಾಖ್‌ ಕಳುಹಿಸಿದ್ದಾನೆ. ಜೊತೆಗೆ ಮಹರ ಮತ್ತು ಇದ್ದತ್‌ ಅವಧಿಯ .17,786 ಡಿಡಿ ಮೂಲಕ ಪತ್ನಿಗೆ ಕಳುಹಿಸಿದ್ದಾನೆ ಎಂದು ಆಯೇಶಾ ದೂರಿನಲ್ಲಿ ತಿಳಿಸಿದ್ದಾರೆ.