ಇಂದೋರ್‌[ಆ.22]: ಒಂದು ವರ್ಷದ ಮಗಳ ಅಳುವಿನಿಂದಾಗಿ ನಿದ್ದೆ ಭಂಗ ಉಂಟಾಗುತ್ತಿದೆ ಎಂದು ಪತಿ ಮಹಾಶಯನೊಬ್ಬ ತ್ರಿವಳಿ ತಲಾಖ್‌ ಕೊಟ್ಟಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

25 ವರ್ಷದ ಅಕ್ಬರ್‌ ಎಂಬಾತ ತನ್ನ ಪತ್ನಿ ಉಝ್ಮಾ ಅನ್ಸಾರಿ (21)ಗೆ ತ್ರಿವಳಿ ತಲಾಖ್‌ ನೀಡಿದ್ದು, ಸೇಂಧ್ವಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಟುಂಬಸ್ಥರ ಎದುರಲ್ಲೇ ನನಗೆ ಪತಿ ತ್ರಿವಳಿ ತಲಾಖ್‌ ನೀಡಿ, ನನ್ನ ತಾಯಿಗೆ ಕರೆ ಮಾಡಿ ಕರೆದುಕೊಂಡು ಹೋಗಿ ಎಂದು ಹೇಳಿ ನನ್ನನ್ನು ಮತ್ತು ಮಗುವನ್ನು ಮನೆಯಿಂದ ಹೊರಗೆ ಹಾಕಿದ್ದಾನೆ.

ಮಾವ ಮತ್ತು ಮೈದುನ ನನ್ನ ಮೇಲೆ ಹಲ್ಲೆ ಮಾಡಿದ್ದು, ಮಗುವಿಗೂ ಹೊಡೆದು ಹಾಸಿಗೆ ಮೇಲೆ ಎಸೆದಿದ್ದಾರೆ ಎಂದು ಆರೋಪಿಸಿದ್ದಾಳೆ. ಅಲ್ಲದೇ ವರದಕ್ಷಿಣೆ ಕಿರುಕುಳ ಕೂಡ ನೀಡುತ್ತಿದ್ದರು ಎಂದು ದೂರು ದಾಖಲಿಸಿದ್ದಾಳೆ. ಪ್ರಕರಣ ಸಂಬಂಧ ಪೊಲೀಸ್‌ ವಿಚಾರಣೆ ನಡೆಯುತ್ತಿದೆ.