Asianet Suvarna News Asianet Suvarna News

ಬೆಳ್ಳಿ ಹೆಜ್ಜೆಯಲ್ಲಿ ದತ್ತಣ್ಣ

ದುಡ್ಡು ತೆಗೆದುಕೊಂಡು ಸಿನಿಮಾದಲ್ಲಿ ನಟಿಸುವವರು  ಕಲಾಸೇವೆ ಮಾಡುತ್ತಿದ್ದೇವೆ ಅಂತ ಹೇಳುವುದು ಸರಿಯಲ್ಲ. ನಿಜವಾದ ಕಲಾಸೇವೆ ಮಾಡುವವರು ಹವ್ಯಾಸಿ ರಂಗಭೂಮಿಯವರು. ಒಬ್ಬ ನಟ ನಿಜವಾಗಿ ನಟನೆ ಮಾಡಲು ಸಾಧ್ಯ ಆಗೋದು ಭಾಷೆ ಮೇಲೆ ಹಿಡಿತ ಇದ್ದಾಗ ಮಾತ್ರ ಎಂದು ಹಿರಿಯ ನಟ ದತ್ತಣ್ಣ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಹೇಳಿದರು. 

Karnataka Film Academy honours Dattanna Belli Hejje
Author
Bengaluru, First Published Jul 28, 2018, 2:05 PM IST

ಬೆಂಗಳೂರು : ಮೊದಲ ಸಿನಿಮಾ ನಿರ್ಮಿಸಲು ಚಿತ್ರರಂಗಕ್ಕೆ ಬರುವವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಆ ಸಿನಿಮಾ ಮಾಡಬಹುದಾ, ಹೇಗೆ ಮಾಡಬೇಕು, ಖರ್ಚು ಮಾಡಿದ ದುಡ್ಡನ್ನು ವಾಪಸ್ ಪಡೆಯುವುದು ಹೇಗೆ ಎಂದು ಸಂಪೂರ್ಣ ಮಾಹಿತಿ, ಮಾರ್ಗದರ್ಶನ ನೀಡಬೇಕು. 

ನಾಡು, ನುಡಿ, ಜಲ ವಿಷಯ ಬಂದಾಗ ನಾವು ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾನು ಡಬ್ಬಿಂಗ್ ಮತ್ತು ರೀಮೇಕ್ ವಿರೋಧಿ. ದುಡ್ಡು ತೆಗೆದುಕೊಂಡು ಸಿನಿಮಾದಲ್ಲಿ ನಟಿಸುವವರು  ಕಲಾಸೇವೆ ಮಾಡುತ್ತಿದ್ದೇವೆ ಅಂತ ಹೇಳುವುದು ಸರಿಯಲ್ಲ. ನಿಜವಾದ ಕಲಾಸೇವೆ ಮಾಡುವವರು ಹವ್ಯಾಸಿ ರಂಗಭೂಮಿಯವರು. ಒಬ್ಬ ನಟ ನಿಜವಾಗಿ ನಟನೆ ಮಾಡಲು ಸಾಧ್ಯ ಆಗೋದು ಭಾಷೆ ಮೇಲೆ ಹಿಡಿತ ಇದ್ದಾಗ ಮಾತ್ರ. ಸಿನಿಮಾದಲ್ಲಿ ಸಂಗೀತ ಇರಬೇಕು. ಆದರೆ ಸಂಗೀತ ಇದೆ ಅಂತ ಗೊತ್ತಾಗಬಾರದು. 

ನಿರ್ದೇಶಕನಾಗುವುದು ತುಂಬಾ ಕಷ್ಟ. ನಟನಾಗಿ ಆರಾಮಾಗಿ ಇರಬಹುದು. ಈ ಮಾತುಗಳನ್ನು ಹೇಳಿದ್ದು ಹಿರಿಯ ನಟ ದತ್ತಣ್ಣ (ಎಚ್ .ಜಿ. ದತ್ತಾತ್ರೇಯ). ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮೆಲುಮಾತಿನಲ್ಲಿ ತಮ್ಮ ಸಿನಿಮಾ ಅನುಭವ, ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ಕೆಲಸ ಮಾಡಿದ ನೆನಪು, ಒಂಟಿಯಾಗಿ ಉಳಿದ ನಿರ್ಧಾರ, ಗೋಪವನ್ನು ಕಳೆದುಕೊಂಡ ಬಗೆ, ಹೊಸದಾಗಿ ಚಿತ್ರರಂಗಕ್ಕೆ ಬರುವವರ ಸಾಹಚರ್ಯ, ಕಮರ್ಷಿಯಲ್- ಕಲಾ ಸಿನಿಮಾಗಳಿಗಿರುವ ವ್ಯತ್ಯಾಸ, ಸರಳ ಬದುಕು ಇತ್ಯಾದಿ ಎಲ್ಲಾ ವಿಷಯಗಳನ್ನು ಹೇಳಿಕೊಂಡರು.

ಕಮರ್ಷಿಯಲ್ ಮತ್ತು ಆರ್ಟ್ ಸಿನಿಮಾ ‘ಕಮರ್ಷಿಯಲ್ ಮತ್ತು ಆರ್ಟ್ ಸಿನಿಮಾ ಎರಡೂ ಬೇರೆ ಬೇರೆ ಸಾಲಿನಲ್ಲಿ ನಿಲ್ಲುತ್ತವೆ. ಕಮರ್ಷಿಯಲ್ ಸಿನಿಮಾದಲ್ಲಿ ವೈಭವೀಕರಣ ಇರುತ್ತದೆ. ಒಬ್ಬ ಹೀರೋ ಇಡೀ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗುತ್ತಾನೆ. ಆರ್ಟ್ ಸಿನಿಮಾ ಅನ್ನುವುದು ನಿರ್ದೇಶಕನ ಸಿನಿಮಾ. ಆರ್ಟ್ ಸಿನಿಮಾದಲ್ಲಿ ನಟರು ನಿರ್ದೇಶಕನ ಅಡಿಯಾಳುಗಳು. ಆಮೇಲೆ ಸಿನಿಮಾ ಯಾವುದೇ ಇರಲಿ. ನಟರು ನಿರ್ದೇಶಕನ ಕಲ್ಪನೆ ಮೀರುವ ಪ್ರಯತ್ನ ಮಾಡಬಾರದು. ತಮ್ಮ ಮಿತಿಯೊಳಗೆ ಕುಸುರಿ ಕೆಲಸ ಮಾಡಬಹುದು’ ಎಂದರು.

ಚಿತ್ರರಂಗಕ್ಕೆ ಬಂದ ಕತೆ: ‘ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದ ನಾನು ನಂತರ ಎಚ್‌ಎಎಲ್‌ನಲ್ಲಿ ಕೆಲಸ ಮಾಡಬೇಕಾಗಿ ಬಂತು. ಆ ಸಂದರ್ಭದಲ್ಲಿ ಅಣ್ಣ ಸೋಮಶೇಖರ ರಾವ್ ಮನೆಗೆ ಬರುತ್ತಿದ್ದೆ. ಅದೊಂದು ದಿನ ಅಣ್ಣ ನಾಗಾಭರಣ ನಿರ್ದೇಶನದ ಆಸ್ಫೋಟ ಚಿತ್ರದ ಮುಹೂರ್ತಕ್ಕೆ ಕರೆದೊಯ್ದರು. ಅದಕ್ಕೂ ಮೊದಲು ನಾನು ತುಂಬಾ ನಾಟಕಗಳಲ್ಲಿ ನಟಿಸಿದ್ದೆ. ಟಿಎಸ್ ರಂಗ ಒತ್ತಾಸೆಯಿಂದ ಉದ್ಭವ ಎಂಬ ಒಂದು ಹಿಂದಿಯ ಒಂದು ಗಂಟೆಯ ಚಿತ್ರದಲ್ಲೂ ನಟಿಸಿದ್ದೆ. 

ನನ್ನನ್ನು ಅಲ್ಲಿ ನೋಡಿದ ನಾಗಾಭರಣ ಚಿತ್ರದಲ್ಲಿ ನಟಿಸಲು ಕೇಳಿಕೊಂಡರು. ಮೊದಲು ಹಿಂಜರಿದ ನಾನು ಆಮೇಲೆ ಅವರ ನಂಬಿಕೆಯಿಂದ ಒಪ್ಪಿದೆ. ಚಿತ್ರರಂಗಕ್ಕೆ ಬಂದಿದ್ದು ಹೀಗೆ’ ಎಂದರು. ಸಾಕ್ಷ್ಯಚಿತ್ರ ಪ್ರದರ್ಶನ: ಪಿ.ಶೇಷಾದ್ರಿ ನಿರ್ದೇಶನದ ‘ದತ್ತಣ್ಣ’ ಸಾಕ್ಷ್ಯಚಿತ್ರ ಇಡೀ ಕಾರ್ಯಕ್ರಮದ ಹೈಲೈಟ್. ಕಷ್ಟದಲ್ಲಿರುವವರಿಗೆ ಯಾರಿಗೂ ಗೊತ್ತಾಗದಂತೆ ಸಹಾಯ ಮಾಡುವವರಿಗೆ ಎಲ್ಲಾ ವಿಚಾರಗಳೂ ಸಂವಾದದಲ್ಲಿ ಬಂದುಹೋದವು. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಪತ್ರಕರ್ತ ಶ್ಯಾಮ್‌ಪ್ರಸಾದ್ ಸಂವಾದ ನಿರ್ವಹಣೆ ಮಾಡಿದರು.

ದತ್ತಣ್ಣ ಸಹೋದರ ಸೋಮಶೇಖರ ರಾವ್, ಸಹೋದರಿ ಗಿರಿಜಮ್ಮ, ನಿರ್ದೇಶಕ ಭಗವಾನ್, ಟಿಎನ್ ಸೀತಾರಾಮ್, ನಾಗಾಭರಣ, ಬಿಎಸ್ ಲಿಂಗದೇವರು, ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಎಚ್‌ಬಿ ದಿನೇಶ್, ವಾರ್ತಾ ಇಲಾಖೆ ಆಯುಕ್ತ ಡಾ.ಪಿಎಸ್ ಹರ್ಷ ಇದ್ದರು. ಭಾನುಮತಿ ಕಾರ್ಯಕ್ರಮ ನಿರೂಪಣೆ ಮಾಡಿದರು.

Follow Us:
Download App:
  • android
  • ios