Asianet Suvarna News Asianet Suvarna News

ನಾನೇಕೆ ನನ್ನ ಸಾಲ ಮನ್ನಾ ಮಾಡಬೇಡಿ ಅಂದಿದ್ದೇನೆ? ಸಿಎಂಗೆ ರೈತನ ಬಹಿರಂಗ ಪತ್ರ

ಒಬ್ಬ ರೈತನಾಗಿ ಸ್ವಾಭಿಮಾನದಿಂದ ಬದುಕಬೇಕು ಎನ್ನುವುದು ನನ್ನ ಕನಸು. ಯಾರ ಋಣದಲ್ಲೂ ಇರಲು ನನಗೆ ಇಷ್ಟವಿಲ್ಲ. ಅದು ಸರ್ಕಾರದ ಋಣ ಆಗಿರಬಹುದು, ಇನ್ಯಾರದ್ದಾದರೂ ಆಗಿರಬಹುದು. ನನ್ನಲ್ಲಿ ದುಡಿಯುವ ಶಕ್ತಿಯಿದೆ. ನನ್ನ ಮನೆಯವರೂ ದುಡಿಮೆಯಲ್ಲಿ ಕೈಜೋಡಿಸುತ್ತಾರೆ.

Karnataka farmer writes to Chief Minister says no to loan
Author
Bengaluru, First Published Aug 16, 2018, 4:35 PM IST

ನಾನು ಒಬ್ಬ ಸಾಮಾನ್ಯ ರೈತ. ಚಿಕ್ಕಮಗಳೂರಿನ ಕರಡಗೋಡು ಗ್ರಾಮದಲ್ಲಿ ನನಗೆ 11 ಎಕರೆಯಷ್ಟು ಜಮೀನಿದೆ. ಅದರಲ್ಲಿ ಕಾಫಿ ಮತ್ತು ಕಾಳು ಮೆಣಸು ಬೆಳೆಯುತ್ತಿದ್ದೇನೆ. ಕೃಷಿಗಾಗಿ 4 ಲಕ್ಷ ರು.ಗಳಷ್ಟು ಸಾಲ ಮಾಡಿದ್ದೇನೆ. ನಮ್ಮ ರಾಜ್ಯ ಸರ್ಕಾರ ರೈತರಿಗೆ ಸಾಲಮನ್ನಾ ಘೋಷಣೆ ಮಾಡಿದೆ. ನನಗೂ 1ಲಕ್ಷದಷ್ಟು ಸಾಲ ಮನ್ನಾ ಆಗುತ್ತಿದೆ. ಆದರೆ ಒಬ್ಬ ಸ್ವಾಭಿಮಾನಿ ಕೃಷಿಕನಾಗಿ ನಾನು ಇದನ್ನು ತಿರಸ್ಕರಿಸಿದ್ದೇನೆ. ಇಷ್ಟಾಗಿಯೂ ನನ್ನ ಸಾಲ ಮನ್ನಾ ಆದರೆ
ನಾನು ಅದನ್ನು ಪುನಃ ಮುಖ್ಯಮಂತ್ರಿಗಳ ಪರಿಹಾರ ನಿಧಿಗೇ ಹಿಂತಿರುಗಿಸುತ್ತೇನೆ.ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಜೊತೆಗೆ ಕೃಷಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೂ ಪತ್ರದ ಮೂಲಕ ತಿಳಿಸಿದ್ದೇನೆ.

ಯಾರ ಹಂಗು ನನಗೇಕೆ? 
ಒಬ್ಬ ರೈತನಾಗಿ ಸ್ವಾಭಿಮಾನದಿಂದ ಬದುಕಬೇಕು ಎನ್ನುವುದು ನನ್ನ ಕನಸು. ಯಾರ ಋಣದಲ್ಲೂ ಇರಲು ನನಗೆ ಇಷ್ಟವಿಲ್ಲ. ಅದು ಸರ್ಕಾರದ ಋಣ ಆಗಿರಬಹುದು, ಇನ್ಯಾರದ್ದಾದರೂ ಆಗಿರಬಹುದು. ನನ್ನಲ್ಲಿ ದುಡಿಯುವ ಶಕ್ತಿಯಿದೆ. ನನ್ನ ಮನೆಯವರೂ ದುಡಿಮೆಯಲ್ಲಿ ಕೈಜೋಡಿಸುತ್ತಾರೆ. ಮಳೆ, ಬಿಸಿಲು ಅನ್ನದೇ ಕಷ್ಟಪಟ್ಟು ದುಡಿಯುವ ನನಗೆ ನೆಮ್ಮದಿ ಮುಖ್ಯವೇ ಹೊರತು, ಸರ್ಕಾರ ನೀಡುವ ಭಿಕ್ಷೆಯಲ್ಲ! ಹೌದು, ಈಗ ಸರ್ಕಾರ ನೀಡುತ್ತಿರುವ ಸಾಲಮನ್ನಾ ನನಗೆ ಭಿಕ್ಷೆಯಂತೆ ಕಾಣುತ್ತದೆ. ‘ನಾವು ಸಾಲ ಮನ್ನಾ ಮಾಡಿದ್ರಿಂದ ಏನೋ ಆಗ್ಹೋಯ್ತು, ಅದರಿಂದಲೇ ರೈತರಿಂದು ಬದುಕುತ್ತಿದ್ದಾರೆ’ ಎಂದು ಸರ್ಕಾರ ಭಾವಿಸಿದರೆ ನಮ್ಮ ದುಡಿಮೆಗೆ ಬೆಲೆ ಇಲ್ಲದ ಹಾಗಾಗುತ್ತದೆ.

ದುಡಿದು ಬದುಕುವ ಸಾಮರ್ಥ್ಯ ಇರುವ ನಾನು ಅವರೆದುರು ಯಾಕೆ ಕೈಚಾಚಲಿ? ನಮಗೆ ಆತ್ಮತೃಪ್ತಿ ಮುಖ್ಯ. ಅವರು ಕೊಟ್ಟದ್ದನ್ನು ನಾನು ಉಣ್ತೀನಿ ಅನ್ನೋದಕ್ಕಿಂತಲೂ, ನಾನು ಬೆವರು ಹರಿಸಿ ಸಿಕ್ಕಿದ ಫಲ ಉಣ್ತೀನಿ ಅನ್ನುವುದರಲ್ಲಿ ಆತ್ಮತೃಪ್ತಿ ಇದೆ. ಸರ್ಕಾರಕ್ಕೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ನಮ್ಮ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲಿ. ಸರ್ಕಾರ ರೈತರಿಗೆ ನೀಡುತ್ತಿರುವ ರಸಗೊಬ್ಬರ, ಕೀಟನಾಶಕಗಳು ತೀರಾ ಕಳಪೆ ಗುಣಮಟ್ಟದವು. ಅವನ್ನು ತಡೆಗಟ್ಟಲಿ.

ಬ್ಯಾಂಕ್‌ನವರಿಂದಲೇ ಮೋಸ
ಹಾಗೆ ನೋಡಿದರೆ ನನಗೆ ಕೃಷಿ ಸಾಲದ ವಿಷಯವಾಗಿ ಬ್ಯಾಂಕ್‌ನವರೇ ಮೋಸ ಮಾಡಿದ್ದಾರೆ. ಮಳೆ ಆಧಾರಿತ ವಿಮೆ ಹೆಸರಿನಲ್ಲಿ ನನ್ನ ಬಳಿ ಕೇಳದೆ ನನ್ನ ಸಾಲದ ಅಕೌಂಟ್‌ನಿಂದ 7000 ರು. ಕಡಿತ ಮಾಡಿದ್ದಾರೆ. ನಾನಾಗಿಯೇ ಕೇಳಿದಾಗ ಅದು ವಿಮೆಗೆ ಕಡಿತ ಮಾಡಿದ್ದು ಅಂತ ಹೇಳಿದರು. ಕಳೆದ ವರ್ಷ ಜಾಸ್ತಿ ಮಳೆಯಾಗಿ ನನ್ನ ಬೆಳೆ ಹಾಳಾಯ್ತು. ಆದರೆ ವಿಮೆಗಾಗಿ ಹಣ ಕಟ್ ಮಾಡಿದವರು ಒಂದು ರುಪಾಯಿ ಪರಿಹಾರ ಕೊಟ್ಟಿಲ್ಲ. ಬ್ಯಾಂಕ್‌ನಲ್ಲಿ ಕೇಳಿದರೆ ನಮಗೆ ಹಣ ಕಟ್ ಮಾಡಲಿಕ್ಕೆ ಮಾತ್ರ ಹೇಳಿದ್ದಾರೆ. ವಿಮೆ ಪರಿಹಾರದ ವಿಷಯ ನಮಗೆ ತಿಳಿದಿಲ್ಲ ಅಂದರು. ವಿಮೆ ಹಣ ಅಂದ ಮೇಲೆ ನನಗೆ ಬೆಳೆ ನಷ್ಟವಾದಾಗ ವಾಪಸ್ ಕೊಡಬೇಕಿತ್ತಲ್ಲಾ, ಯಾಕೆ ಕೊಟ್ಟಿಲ್ಲ? ಹಾಗಾದರೆ ಆ  ಹಣವೆಲ್ಲ ಎಲ್ಲಿ ಹೋಯ್ತು? ಹೀಗೆ ಲಕ್ಷಾಂತರ ರೈತರಿಂದ ಜಮೆ ಮಾಡಿಸಿಕೊಂಡಿದ್ದಾರೆ. ಆ ಹಣ ಎಲ್ಲಿ ಹೋಯ್ತು ಅನ್ನುವ ಮಾಹಿತಿಯೇ ಇಲ್ಲ. 

ಅಷ್ಟೇ ಅಲ್ಲ, ನಮ್ಮ ಜಿಲ್ಲೆಗೆ ಬೆಳೆ ಪರಿಹಾರ ಅಂತ 69 ಲಕ್ಷ ರು. ಬಿಡುಗಡೆಯಾಗಿದೆ. ಆ ಹಣವನ್ನು ಯಾರಿಗೆ ಕೊಟ್ಟಿದ್ದಾರೆ ಅನ್ನುವ ಮಾಹಿತಿ ಕೃಷಿ ಅಧಿಕಾರಿಗಳಿಗೆ ಇಲ್ಲ. ಪ್ರಶ್ನಿಸಿದರೆ ಅವರ ಬಳಿ ಉತ್ತರವೇ ಇಲ್ಲ. ಇದು ಅನ್ಯಾಯ ಅಲ್ಲವಾ? ಸಮಸ್ಯೆಗಳನ್ನು ಸರಿಪಡಿಸದೇ, ನಮಗೆ ನೀಡಬೇಕಾದ ಸವಲತ್ತುಗಳನ್ನು ನೀಡದೇ ಹೀಗೆ ಸಾಲ ಮನ್ನಾ ಮಾಡುವುದರ ಹಿಂದಿನ ಉದ್ದೇಶ ಏನು? ನಮ್ಮನ್ನು ಋಣದಲ್ಲಿಟ್ಟು ಕೊಳ್ಳುವುದಾ? ಸರ್ಕಾರ ಸ್ಪಷ್ಟಪಡಿಸಲಿ. ಅದೇ ಕಾರಣ ಅಂತಾದರೆ ಈ ಮನ್ನಾ ಖಂಡಿತ ಬೇಕಿಲ್ಲ. ನಾವು ದುಡಿದು ನಮ್ಮ ಸಾಲ ತೀರಿಸುತ್ತೇವೆ. ಒಂದು ಕೈಯಲ್ಲಿ ಕಿತ್ತುಕೊಂಡು ಇನ್ನೊಂದು ಕೈಯಲ್ಲಿ ಉದಾರತನದಿಂದ ಕೊಡುಗೆ ಕೊಟ್ಟಂತೆ ಮಾಡುವುದಕ್ಕೆ ಏನಾದರೂ ಮಾನವೀಯ ಮುಖ ಇದೆ ಅಂತ ನನಗಂತೂ ಅನಿಸಿಲ್ಲ. 

ಶ್ರೀಮಂತರ ಸಾಲಮನ್ನಾ ಬೇಡ
ನಿಜಕ್ಕೂ ಕೆಲವು ರೈತರಿಗೆ ಸಾಲಮನ್ನಾದ ಅಗತ್ಯ ಇರಬಹುದು. ಅವರಿಗೆ ಬಹಳ ಕಷ್ಟ ಇರಬಹುದು. ಅವರಿಗೆ ಮನ್ನಾ ಮಾಡಲಿ. ಆದರೆ ಆರ್ಥಿಕವಾಗಿ ಚೆನ್ನಾಗಿರುವ ಕೃಷಿಕರಿಗೆ ಅದರ ಅಗತ್ಯ ಇಲ್ಲ. ಇದನ್ನು ರೈತರೇ ಸರ್ಕಾರಕ್ಕೆ ಹೇಳಬೇಕು. ನನ್ನ ಆರ್ಥಿಕ ಚೈತನ್ಯ ಚೆನ್ನಾಗಿದೆ, ನನಗೆ ಸಾಲ ಮನ್ನಾ ಬೇಕಿಲ್ಲ ಎಂದು ಹೇಳಬೇಕು. ಆಗ ರಾಜ್ಯದ ಅಭಿವೃದ್ಧಿಯಾಗುತ್ತದೆ. ನರೇಂದ್ರ ಮೋದಿ ಅವರು ಗ್ಯಾಸ್ ಸಬ್ಸಿಡಿ ಬಿಡಿ ಅಂತ ಕರೆ ಕೊಟ್ಟರಲ್ಲ, ಲಕ್ಷಾಂತರ ಜನ ಸಬ್ಸಿಡಿ ಬಿಟ್ಟುಕೊಟ್ಟರು. ಅದೇ ರೀತಿ ಕುಮಾರಸ್ವಾಮಿ ಅವರೂ ಕರೆ ಕೊಡಲಿ.

Karnataka farmer writes to Chief Minister says no to loan

ಆರ್ಥಿಕ ಚೈತನ್ಯ ಇರುವ ಕೃಷಿಕರು ಸಾಲ ಮನ್ನಾ ಬಿಡಲಿ ಅಂತ ಮನವಿ ಮಾಡಲಿ. ಅದರಿಂದ ಸರ್ಕಾರಕ್ಕೆ ಒಂದಿಷ್ಟು ಕೋಟಿ ಉಳಿಯಬಹುದು, ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬಹುದು. ರೈತರಿಗೆ ಬೇರೆ ಬೇರೆ ಸೌಲಭ್ಯಗಳನ್ನು ಕೊಡಬಹುದು. ನನಗೆ ನಾಲ್ಕೂವರೆ ಲಕ್ಷದಿಂದ ಐದು ಲಕ್ಷದವರೆಗೂ ವಾರ್ಷಿಕ ಆದಾಯವಿದೆ. ಹಾಗೆಂದು ಪ್ರತಿ ವರ್ಷ ಅದೇ ಆದಾಯ ಬರುತ್ತೆ ಅಂತ ಹೇಳಲಾಗದು. ಆದರೆ ಇದು ನನ್ನ ಸಮಸ್ಯೆ. ನನಗೆ ಕಷ್ಟ ಆಯ್ತು ಅಂದಕೂಡಲೇ ಅವರ ಮುಂದೆ ಕೈಯೊಡ್ಡಿ ನಿಲ್ಲುವ ಲೆವೆಲ್‌ಗೆ ಇಳಿಯಬೇಕು ಅಂತ ನನಗನಿಸಲ್ಲ. 

ಈ ಬಾರಿಯ ನಷ್ಟವನ್ನು ಮುಂದಿನ ವರ್ಷ ತುಂಬುವ ಪ್ರಯತ್ನ ಮಾಡುತ್ತೇವೆ. ಊಟ ಮಾಡುವಲ್ಲಿ ಗಂಜಿ ಕುಡೀತೇವೆ ಅಷ್ಟೇ. ಹುಡುಕಿದರೆ ರೈತರಿಗೂ ಒಂದಲ್ಲ ಒಂದು ದಾರಿ ಸಿಕ್ಕೇ ಸಿಗುತ್ತದೆ. ನಮ್ಮ ವಾಹನ ಮಾರಿಯೋ ಬೇರೆ ಕಡೆ ಸಾಲ ಮಾಡಿಯೋ ಈ ಸಾಲ ತೀರಿಸ್ತೇವೆ. ನಮಗೆ ಅವರ ಋಣದಲ್ಲಿರುವ ಅವಶ್ಯಕತೆ ಇಲ್ಲ. ಈ ಸಾಲ ಮನ್ನಾ ನಮಗಾದ ಅನ್ಯಾಯ, ಮೋಸಗಳಿಗೆಲ್ಲ ಪರಿಹಾರ ಅಲ್ಲ. ಹಾಗಾಗಿ ಈ ಬಹಿರಂಗ ಪತ್ರ.

- ಇಂತಿ
ಅಮರನಾಥ, ಚಿಕ್ಕಮಗಳೂರು

- ನಿರೂಪಣೆ: ಪ್ರಿಯಾ ಕೆರ್ವಾಶೆ

Follow Us:
Download App:
  • android
  • ios