ಆದರೂ ಸಿದ್ದರಾಮಯ್ಯ ಅವರು ಇದೇ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡಿದರೆ, ಅವರ ಪುತ್ರ ಡಾ| ಎಸ್. ಯತೀಂದ್ರ ಅವರು ವರುಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿರುವ ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರ ಈ ಬಾರಿ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಮರುವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಅತ್ಯಂತ ಸುರಕ್ಷಿತ ಎನಿಸಿಕೊಂಡಿತ್ತು. ಹೀಗಾಗಿಯೇ ಅವರು ಎರಡು ಬಾರಿ ಇಲ್ಲಿಂದ ಆರಿಸಿಬಂದಿದ್ದರು. ಮುಖ್ಯಮಂತ್ರಿ ಹುದ್ದೆಗೂ ಏರಿದರು. ಈಗ ಅವರು ತಾವು ಹಿಂದೆ ಪ್ರತಿನಿಧಿಸುತ್ತಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಲಸೆ ಹೋಗಲು ನಿರ್ಧರಿಸಿದ್ದಾರೆ.

ಆದರೂ ಸಿದ್ದರಾಮಯ್ಯ ಅವರು ಇದೇ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡಿದರೆ, ಅವರ ಪುತ್ರ ಡಾ| ಎಸ್. ಯತೀಂದ್ರ ಅವರು ವರುಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ. ಹೀಗಾಗಿ ಅವರನ್ನು ಮಣಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಕಣಕ್ಕಿಳಿಸಬೇಕು ಎಂಬ ಆಗ್ರಹ ಬಿಜೆಪಿಯಿಂದ ಕೇಳಿಬಂದಿದೆ.

ಹಾಗೇನಾದರೂ ಆದಲ್ಲಿ ಈ ಕ್ಷೇತ್ರ ತುರುಸಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರೇ ಪರೋಕ್ಷವಾಗಿ ಕಣಕ್ಕಿಳಿದಂತೆ ಆಗಲಿದ್ದು, ಈ ಕ್ಷೇತ್ರ ಗೆಲ್ಲುವುದು ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಪ್ರತಿಷ್ಠೆಯ ವಿಷಯವಾಗಲಿದೆ. ಜಾತಿ ಸಮೀಕರಣ, ಸಿಎಂ ಆದ ನಂತರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್‌ಗೆ ಪೂರಕವಾಗಿಯೇ ಇವೆ. ಇದು ನನ್ನ ಕೊನೆಯ ಚುನಾವಣೆ, ಮತ್ತೊಮ್ಮೆ ಸಿಎಂ ಆಗುವ ಅವಕಾಶವಿದೆ, ಮಗನನ್ನು ಆಶೀರ್ವದಿಸಿ ಎಂದು ಭಾವನಾತ್ಮಕವಾಗಿ ಮತದಾರರ ಮನಗೆಲ್ಲಲು ಸಿದ್ದರಾಮಯ್ಯ ಯತ್ನಿಸುವ ಸಾಧ್ಯತೆ ಇದೆ.

 ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಕಾ.ಪು. ಸಿದ್ದಲಿಂಗಸ್ವಾಮಿ, ಜಿಪಂ ಮಾಜಿ ಅಧ್ಯಕ್ಷರಾದ ಕೆ.ಎನ್. ಪುಟ್ಟಬುದ್ದಿ, ಯಡಿಯೂರಪ್ಪ ಸಹೋದರಿಯರ ಪುತ್ರರಾದ ಎಸ್.ಸಿ. ಅಶೋಕ್, ಎಸ್.ಸಿ. ರಾಜೇಶ್ ಸೇರಿದಂತೆ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಲಿಂಗಾಯತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಿವೃತ್ತ ಡಿಜಿಪಿ ಶಂಕರ ಬಿದರಿ ಹೆಸರೂ ಚರ್ಚೆಯಲ್ಲಿತ್ತು.ಈಗ ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಪ್ರಸ್ತಾಪಗೊಳ್ಳುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೈಸೂರು ಭೇಟಿಯ ಸಂದರ್ಭದಲ್ಲೂ ವಿಜಯೇಂದ್ರ ಸ್ಪರ್ಧೆಗೆ ಒತ್ತಾಯ ಮಾಡಲಾಗಿದೆ.

ವರಿಷ್ಠರು ನಿಜಕ್ಕೂ ಇದಕ್ಕೆ ಮಣಿದಲ್ಲಿ ವರುಣ ಕ್ಷೇತ್ರದ ಕಣ ಸಾಕಷ್ಟು ರಂಗೇರಲಿದೆ. ಆಸ್ತ್ರೇಲಿಯಾದ ಗ್ಲೋಬಲ್ ಬ್ಯಾಂಕ್‌ನಲ್ಲಿ ಎಂಜಿನಿಯರ್ ಆಗಿದ್ದ ಎಸ್.ಎಂ. ಅಭಿಷೇಕ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಇವರು ನಿವೃತ್ತ ಪ್ರಾಧ್ಯಾಪಕ ಮಣೇಗಾರ್ ಸುಬ್ಬಪ್ಪ- ಪ್ರಸೂತಿ ತಜ್ಞೆ ಡಾ.ಲೀಲಾವತಿ ಅವರ ಪುತ್ರ. ಇದೇ ಕ್ಷೇತ್ರ ವ್ಯಾಪ್ತಿಯ ಬೊಕ್ಕಹಳ್ಳಿಯವರು. ಈಗಾಗಲೇ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರೆಸಿ, ಕಾರ್ಯಕ್ರಮ ನಡೆಸಿದ್ದಾರೆ. ಯತೀಂದ್ರ, ವಿಜಯೇಂದ್ರ ಹಾಗೂ ಅಭಿಷೇಕ್ ಮೂವರಿಗೂ ಇದು ಮೊದಲ ಚುನಾವಣೆ ಹಾಗೂ ಮೂವರೂ ಕಿರಿಯ ವಯಸ್ಸಿನವರು.

- ಅಂಶಿ ಪ್ರಸನ್ನಕುಮಾರ್,ಮೈಸೂರು