ಬಹ್ರೇನ್ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿಯೂ ಕೂಡ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅನಿವಾಸಿ ಕನ್ನಡಿಗರ ಓಲೈಕೆಗೆ ಮುಂದಾಗಿದ್ದು, ಅಲ್ಲಿಯೂ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡಿದ್ದಾರೆ.  

ನವದೆಹಲಿ(ಜ.09): ಬಹ್ರೇನ್ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿಯೂ ಕೂಡ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅನಿವಾಸಿ ಕನ್ನಡಿಗರ ಓಲೈಕೆಗೆ ಮುಂದಾಗಿದ್ದು, ಅಲ್ಲಿಯೂ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡಿದ್ದಾರೆ.

ಬಹ್ರೇನ್ ಒಳಗೊಂಡ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಮಾತ್ರವೇ ಬಾಕಿ ಇರುವ ಹಿನ್ನೆಲೆಯಲ್ಲಿ ಬಹ್ರೇನ್‌ಗೆ ಭೇಟಿ ನೀಡಿ, ಇಡೀ ಕೊಲ್ಲಿ ರಾಷ್ಟ್ರ ಗಳಲ್ಲಿರುವ ಕನ್ನಡಿಗ ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸುವ ಸಲುವಾಗಿ ರಾಹುಲ್ ಅವರು ಆ ದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತೊಂದೆಡೆ, ಕರ್ನಾಟಕ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಹುಲ್ ಗಾಂಧಿ, ಇದೇ 13ರಂದು ದೆಹಲಿಯಲ್ಲಿ ರಾಜ್ಯದ ಘಟಾನುಘಟಿ ನಾಯಕರ ಸಭೆಯನ್ನು ಕರೆದಿದ್ದಾರೆ. ಮತದಾರರನ್ನು ತಲುಪಲು ಯಾವೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂಬುದರ ಬಗ್ಗೆ ಈ ಸಭೆಯಲ್ಲಿ ಸವಿಸ್ತಾರವಾದ ಚರ್ಚೆ ನಡೆಯಲಿದೆ.

ಕರ್ನಾಟಕದಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ‘360 ಡಿಗ್ರಿ ಯೋಜನೆ’ ನೀಡುವಂತೆ ಈಗಾಗಲೇ ರಾಜ್ಯ ಘಟಕಕ್ಕೆ ಸೂಚನೆ ಹೋಗಿದೆ. ತಳಮಟ್ಟದಲ್ಲಿನ ಪರಿಸ್ಥಿತಿಯನ್ನು ಅಂದಿನ ಸಭೆಯಲ್ಲಿ ವಿಶ್ಲೇಷಿಸುವುದರ ಜತೆ ಹಲವಾರು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಈ ನಡುವೆ, ಈಗಲೇ ಪ್ರಚಾರ ಆರಂಭಿಸುವಂತೆ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಕಾಂಗ್ರೆಸ್ ಘಟಕದಿಂದ ಮನವಿ ಬಂದಿದೆ. ‘ಪ್ರಚಾರ ಆರಂಭಿಸಲು ರಾಹುಲ್ ಅವರಲ್ಲಿ ಕೋರಿಕೊಂಡಿದ್ದೇವೆ. ಜ.20ರ ಬಳಿಕ ಅವರು ಅಖಾಡಕ್ಕೆ ಇಳಿಯಲಿದ್ದಾರೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಜ.27ರಿಂದ ಮೂರು ದಿನ ರಾಹುಲ್ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

ಪಕ್ಷದ ಸಾಮರ್ಥ್ಯ ವೃದ್ಧಿಗಾಗಿ ರಾಹುಲ್ ಗಾಂಧಿ ಅವರು ಮುಂದೆ ನಿಂತು ಪ್ರಚಾರ ಮುನ್ನಡೆಸಬೇಕು ಎಂಬುದು ನಮ್ಮ ಬಯಕೆ. ಜ.20ರ ನಂತರ ಪಕ್ಷದ ಹಿರಿಯ ನಾಯಕರು ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿಯಾಗಿರುವ ಮಧು ಗೌಡ್ ಯಾಕ್ಷಿ ತಿಳಿಸಿದ್ದಾರೆ. ರಾಹುಲ್ ಬಹ್ರೇನ್ ಪ್ರವಾಸದ ಉಸಾಬರಿಗಳನ್ನು ಇದೇ ಯಾಕ್ಷಿ ನೋಡಿಕೊಳ್ಳುತ್ತಿದ್ದಾರೆ.