ರಾಜ್ಯ ಚುನಾವಣಾ ಆಯೋಗದಿಂದ ವಿಶೇಷ ಅಭಿಯಾನ; ಹೆಸರು ಬಿಟ್ಟು ಹೋದವರು ಮತ್ತು ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ನಾಗರಿಕರಿಗೆ ಸುವರ್ಣಾವಕಾಶ
ಬೆಂಗಳೂರು: ಚುನಾವಣೆ ಅಂದರೆ ಪ್ರಜಾತಂತ್ರದ ಹಬ್ಬ. ನಮ್ಮ ಅಧಿಕಾರ ಚಲಾಯಿಸಿ ನಮ್ಮನಾಳುವವರನ್ನು ಆಯ್ಕೆ ಮಾಡುವ ಪ್ರಕ್ರಿಯೆ. ಅದು ನಮ್ಮ ಕರ್ತವ್ಯ ಮತ್ತು ಬಹುದೊಡ್ಡ ಜವಾಬ್ದಾರಿ ಕೂಡಾ.
ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿದೆ. ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರಬೇಕು.
ಆದರೆ ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ನಿಮ್ಮ ಹೆಸರು ಬಿಟ್ಟು ಹೋಗಿರುವ ಸಾಧ್ಯತೆಗಳಿರುತ್ತದೆ. ಮತದಾನ ಮಾಡುವ ಸಂದರ್ಭದಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದು ಕಂಡು ಹೈರಾಣಾಗುತ್ತೇವೆ. ಆ ಹೊತ್ತಿನಲ್ಲಿ ಸಿಟ್ಟಾಗುವುದರಿಂದಲೋ, ವಾಗ್ವಾದ ಮಾಡುವುದರಿಂದಲೋ ಯಾವುದೇ ಪ್ರಯೋಜನವಾಗಲ್ಲ.
ಅದಕ್ಕಾಗಿ ನಾವು ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಮೊದಲೇ ನೋಡಿಕೊಳ್ಳಬೇಕು.
ಹೆಸರು ಬಿಟ್ಟುಹೋದವರಿಗೆ ಹಾಗೂ ಮೊದಲ ಬಾರಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸುವವರಿಗೆ ಚುನಾವಣಾ ಆಯೋಗ ಈಗ ಸುವರ್ಣಾವಕಾಶವನ್ನು ಒದಗಿಸಿದೆ.
ನೀವು ಮಾಡಬೇಕಾದದ್ದಿಷ್ಟೇ:
ಫೆ.23 , 24 ಮತ್ತು ಮಾ.02, 03ಕ್ಕೆ ರಾಜ್ಯ ಚುನಾವಣಾ ಆಯೋಗವು ‘ಮಿಂಚಿನ ನೋಂದಣಿ’ ವಿಶೇಷ ಅಭಿಯಾನ್ನು ಹಮ್ಮಿಕೊಂಡಿದೆ.
ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ ಮತ್ತು ವಿಳಾಸದೊಂದಿಗೆ ಸಮೀಪದ ಮತಗಟ್ಟೆಗೆ 10-5 ಗಂಟೆ ಅವಧಿಯಲ್ಲಿ ಭೇಟಿ ನೀಡಿ, ನಿಮ್ಮ ಅರ್ಜಿ ಸಲ್ಲಿಸಿದರೆ ಸಾಕು.
1 ಜನವರಿ 2019 ವರೆಗೆ 18 ವರ್ಷ ಪ್ರಾಯವಾಗಿರುವವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬಹುದು. www.voterreg.kar.nic.in ವೆಬ್ ಸೈಟ್ ಮೂಲಕವೂ ತಮ್ಮ ಹೆಸರನ್ನು ಸೇರ್ಪಡೆ ಮಾಡುವ ಅವಕಾಶ ಇದೆ.
ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಈ ವೆಬ್ ಸೈಟ್ ಗೆ www.ceokarnataka.kar.nic.in ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.
