ಬೆಂಗಳೂರು[ಸೆ.13]: ರಾಜಧಾನಿ ಬೆಂಗಳೂರಿನ ಉಸ್ತುವಾರಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಪಾಲಾಗುವ ಸಾಧ್ಯತೆ ಕಂಡುಬರುತ್ತಿದೆ.

ಕಂದಾಯ ಸಚಿವ ಆರ್‌.ಅಶೋಕ್‌ ಮತ್ತು ಅಶ್ವತ್ಥನಾರಾಯಣ ಅವರ ನಡುವಿನ ಪೈಪೋಟಿಯಲ್ಲಿ ಅಂತಿಮವಾಗಿ ಬೆಂಗಳೂರು ಉಸ್ತುವಾರಿ ಯಾರ ಪಾಲಾಗಬಹುದು ಎಂಬುದು ಕುತೂಹಲಕರವಾಗಿದ್ದು, ಅಶ್ವತ್ಥನಾರಾಯಣ ಅವರ ಪರ ವಾಲುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಇದಕ್ಕೆ ಪುಷ್ಟಿನೀಡುವಂತೆ ಗುರುವಾರ ತಮ್ಮನ್ನು ಭೇಟಿ ಮಾಡಲು ಆಗಮಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರಿಗೆ ಮಹಾಲಕ್ಷ್ಮೇ ಲೇಔಟ್‌ನಲ್ಲಿ ಸಾರ್ವಜನಿಕರ ಬಳಕೆಗೆ ಇರುವ ನಿವೇಶನವನ್ನು ಉಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಅಶ್ವತ್ಥನಾರಾಯಣ ಅವರು ಭರವಸೆ ನೀಡಿದ್ದಾರೆ. ಈ ಭೇಟಿ ವೇಳೆ ದೊರೆಸ್ವಾಮಿ ಅವರು ಈ ಕೆಲಸ ನಿಮ್ಮಿಂದ ಆಗುತ್ತದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ಬೆಂಗಳೂರಿನ ಉಸ್ತುವಾರಿ ನೋಡಿಕೊಳ್ಳುವಂತೆ ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದು ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ.

ಆದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ಉಸ್ತುವಾರಿಗಾಗಿ ಜಟಾಪಟಿ ಏನಾದರೂ ಉಂಟಾದಲ್ಲಿ ಆಗ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿ ಇಟ್ಟುಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.