ಆದಾಯದ ಪ್ರಮುಖ ಮೂಲಗಳಾದ ಸ್ಟಾಂಪ್ & ನೋಂದಣಿ, ಅಬಕಾರಿ ಮತ್ತು ವ್ಯಾಟ್ ಗಳಿಂದ ಬರುವ ಆದಾಯದಲ್ಲಿ ನೋಟು ಅಮಾನ್ಯ ಕ್ರಮದ ಬಳಿಕ ಶೇ.10 ರಿಂದ ಶೇ.30 ರಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು (ಡಿ.31): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮ ಘೋಷಿಸಿದ ಬಳಿಕ ರಾಜ್ಯದ ಆದಾಯದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯ ಬೊಕ್ಕಸಕ್ಕೆ ಕನಿಷ್ಟ ರೂ.5000 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಏಪ್ರಿಲ್’ನಿಂದ ನವಂಬರ್’ವರೆಗೆ ರಾಜ್ಯದಲ್ಲಿ ಆದಾಯ ಸಂಗ್ರಹ ಉತ್ತಮವಾಗಿತ್ತು. ಆದರೆ ನೋಟು ಅಮಾನ್ಯ ಕ್ರಮದ ಬಳಿಕ ಆಸ್ತಿ ನೋಂದಣೆ, ವಾಹನ ತೆರಿಗೆಗಳು, ಅಬಕಾರಿ ಹಾಗೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಪ್ರತಿ ವಲಯದಲ್ಲಿ ಕನಿಷ್ಠ 1000 ಕೋಟಿ ರೂ,ಗಳಷ್ಟು ಆದಾಯ ಕಡಿಮೆಯಾಗಿದೆ, ಎಂದು ಹಿರಿಯ ಸರ್ಕಾರಿ ಅಧಿಕಾರಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆದಾಯದ ಪ್ರಮುಖ ಮೂಲಗಳಾದ ಸ್ಟಾಂಪ್ & ನೋಂದಣಿ, ಅಬಕಾರಿ ಮತ್ತು ವ್ಯಾಟ್ ಗಳಿಂದ ಬರುವ ಆದಾಯದಲ್ಲಿ ನೋಟು ಅಮಾನ್ಯ ಕ್ರಮದ ಬಳಿಕ ಶೇ.10 ರಿಂದ ಶೇ.30 ರಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸ್ಥಿತಿ ಇನ್ನೂ ಕೆಲ ತಿಂಗಳು ಮುಂದುವರೆಯಲಿದೆಯೆಂದು ಹೇಳಲಾಗಿದೆ.
ನಷ್ಟದ ಪ್ರಮಾಣವನ್ನು ಶೇ.10ರೊಳಗೆ ಕಾಯ್ದುಕೊಳ್ಳುವಲ್ಲಿ ನಾವು ಯಶಸ್ವಿಯಾದರೆ ಅದೊಂದು ದೊಡ್ಡ ಸಾಧನೆಯೇ ಎಂದೇ ಹೇಳಬಹುದು, ಎಂದು ಅವರು ಹೇಳಿದ್ದಾರೆ.
ನಷ್ಟವನ್ನು ಭರಿಸಲು ಕೇಂದ್ರದಿಂದ ನೆರವನ್ನು ಪಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲಿದ್ದಾರೆ ಎಂದು ತಿಳಿದು ಬಂದಿದೆ.
