ಬೆಂಗಳೂರು(ಸೆ. 13): ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರ ಕೈಗೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಮಂಗಳವಾರ ಬೆಳಗ್ಗೆ ಸಿಎಂ ನಿವಾಸದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಧಾನಸಭೆಯನ್ನೇ ವಿಸರ್ಜಿಸಿ ಜನರ ಮುಂದೆ ಹೋಗುವ ಚಿಂತನೆಯೂ ಇದೆ. ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿ ತಮಿಳುನಾಡಿಗೆ ನೀರು ನಿಲ್ಲಿಸುವುದು ಮತ್ತೊಂದು ನಿರ್ಧಾರ. ಈ ನಿಟ್ಟಿನಲ್ಲಿ ಇಡೀ ಸಚಿವ ಸಂಪುಟವು ಒಗ್ಗಟ್ಟಿನಲ್ಲಿ ನಿಂತಿದೆ.

ಕಾವೇರಿ ವಿಚಾರದಲ್ಲಿ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಪದತ್ಯಾಗ ಮಾಡಬೇಕು. ಆ ಬಳಿಕ, ವಿಧಾನಸಭೆಯನ್ನೇ ವಿಸರ್ಜಿಸಿ ಜನರ ಮುಂದೆ ಚುನಾವಣೆಗೆ ಹೋಗಬೇಕು ಎಂದು ಕೆಲ ಹಿರಿಯ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಪ್ರಸ್ತಾವ ಮಾಡಿರುವುದು ತಿಳಿದುಬಂದಿದೆ.

ಸಿದ್ದರಾಮಯ್ಯನವರ ನಿವಾಸ 'ಕೃಷ್ಣಾ'ದಲ್ಲಿ ಎಂ.ಬಿ.ಪಾಟೀಲ್, ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯಿಲಿ, ಆರ್.ಎಲ್.ಜಾಲಪ್ಪ, ಪ್ರಕಾಶ್ ಹುಕ್ಕೇರಿ, ಕೆ.ಎಚ್.ಮುನಿಯಪ್ಪ, ಮಾರ್ಗರೆಟ್ ಆಳ್ವಾ, ಬಿ.ಕೆ.ಹರಿಪ್ರಸಾದ್, ದಿನೇಶ್ ಗುಂಡೂರಾವ್ ಮೊದಲಾದ ಹಿರಿಯ ಮುಖಂಡರು ಹಾಗೂ ಸಚಿವರು ಈ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದಾರೆ.