ಬೆಂಗಳೂರು [ಜು.18] :  ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅಳಿವು ಉಳಿವು ನಿರ್ಧರಿಸುವ ಗಳಿಗೆ ಎದುರಾಗಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮಂಡಿಸಲಿದ್ದಾರೆ.

ಕಳೆದ ಹಲವು ದಿನಗಳಿಂದ ನಡೆದ ರಾಜಕೀಯ ಹೈಡ್ರಾಮಾ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಇದರ ನಂತರ ಸಮ್ಮಿಶ್ರ ಸರ್ಕಾರ ಉಳಿಯುವುದೋ ಅಥವಾ ಪತನಗೊಳ್ಳುವುದೋ ಎಂಬುದು ತೀರ್ಮಾನವಾಗಲಿದೆ.

ಸದ್ಯಕ್ಕೆ ಮೇಲ್ನೋಟಕ್ಕೆ ಕಂಡು ಬರುತ್ತಿರುವ ಬೆಳವಣಿಗೆಗಳನ್ನು ಆಧರಿಸಿ ನೋಡುವುದಾದರೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉಳಿಯುವ ನಿರೀಕ್ಷೆ ಕ್ಷೀಣಿಸಿದೆ. ಒಂದು ವೇಳೆ ರಾಜೀನಾಮೆ ನೀಡಿರುವ ಶಾಸಕರ ಪೈಕಿ ಕೆಲವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಲ್ಲಿ ಅಥವಾ ಪ್ರತಿಪಕ್ಷ ಬಿಜೆಪಿಯ ಕೆಲವು ಸದಸ್ಯರು ಆ ಪಕ್ಷಕ್ಕೆ ಕೈಕೊಟ್ಟಲ್ಲಿ ಸಮ್ಮಿಶ್ರ ಸರ್ಕಾರ ಈ ಸಂಕಷ್ಟದಿಂದ ಪಾರಾಗಬಹುದು. ಇಲ್ಲದಿದ್ದರೆ ಪತನಗೊಳ್ಳುವುದು ನಿಶ್ಚಿತ ಎನ್ನುವಂತಾಗಿದೆ.

ಈ ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚರ್ಚೆ ಗುರುವಾರವೇ ಮುಗಿಯದಿದ್ದರೆ ಶುಕ್ರವಾರವೂ ಮುಂದುವರೆಯುವ ನಿರೀಕ್ಷೆಯಿದೆ. ಆಡಳಿತಾರೂಢ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿಯಿಂದ ಎಷ್ಟುಮಂದಿ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದರ ಮೇಲೆ ಇದು ನಿರ್ಧರಿತವಾಗಲಿದೆ.

ಚರ್ಚೆ ಮುಗಿದ ನಂತರ ಮುಖ್ಯಮಂತ್ರಿಗಳು ಬಯಸಿದಲ್ಲಿ ಮತಕ್ಕೆ ಹಾಕಲಾಗುತ್ತದೆ. ಒಂದು ವೇಳೆ ಸಂಖ್ಯಾಬಲ ದೊರಕುವುದಿಲ್ಲ ಎಂಬುದು ಮುಂಚಿತವಾಗಿಯೇ ಖಚಿತವಾದಲ್ಲಿ ಮುಖ್ಯಮಂತ್ರಿಗಳು ಆ ನಿರ್ಣಯವನ್ನು ಮತಕ್ಕೆ ಹಾಕಲು ನಿರಾಕರಿಸಿ ನೇರವಾಗಿ ತಮ್ಮ ರಾಜೀನಾಮೆಯನ್ನು ಪ್ರಕಟಿಸಬಹುದಾಗಿದೆ. ಅಲ್ಲಿಗೆ ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯೇ ಪೂರ್ಣಗೊಳ್ಳುತ್ತದೆ.

ಬುಧವಾರ ರಾತ್ರಿವರೆಗಿನ ಬೆಳವಣಿಗೆಗಳ ಪ್ರಕಾರ ರಾಜೀನಾಮೆ ನೀಡಿರುವ ಶಾಸಕರ ಪೈಕಿ ರಾಮಲಿಂಗಾರೆಡ್ಡಿ ಹೊರತುಪಡಿಸಿ ಇತರರು ಸದನದ ಕಲಾಪಕ್ಕೆ ಆಗಮಿಸುವ ಸಾಧ್ಯತೆ ಕಡಮೆಯಿದೆ. ರಾಮಲಿಂಗಾರೆಡ್ಡಿ ಅವರು ತಮ್ಮ ರಾಜೀನಾಮೆ ವಾಪಸ್‌ ಪಡೆಯುವ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ, ಮುಂಬೈ ಸೇರಿರುವ ಶಾಸಕರು ತಾವು ಬರುವುದಿಲ್ಲ ಎಂಬುದನ್ನು ಘೋಷಿಸಿದ್ದಾರೆ. ಇನ್ನು ಡಾ.ಕೆ.ಸುಧಾಕರ್‌, ಆನಂದ್‌ ಸಿಂಗ್‌ ಮತ್ತು ಆರ್‌.ರೋಷನ್‌ ಬೇಗ್‌ ಅವರ ನಿಲುವು ಸ್ಪಷ್ಟವಾಗಿ ಹೊರಬಿದ್ದಿಲ್ಲ.

ಈ ನಡುವೆ ವಿಧಾನಸಭೆಯಲ್ಲಿ ಗುರುವಾರ ನಿಗದಿಯಂತೆ ವಿಶ್ವಾಸಮತ ಯಾಚನೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿರುವ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌, ವಿಶ್ವಾಸಮತ ಅದೇ ದಿನ ನಿರ್ಧಾರ ಮಾಡಲೇಬೇಕೆಂದೇನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸಮತ ಯಾಚನೆ ಬಗ್ಗೆ ಮೊದಲು ಚರ್ಚೆ ಆರಂಭವಾಗಲಿದ್ದು ಎಲ್ಲವೂ ಸಂವಿಧಾನ ಬದ್ಧವಾಗಿ ನಡೆಯಲಿದೆ. ಗುರುವಾರ ಸದನ ಇದೆ ಎಂದು ಶಾಸಕರಿಗೆ ನೋಟಿಸ್‌ ಮಾತ್ರ ಕೊಡ್ತೀನಿ, ಬರೋದು ಬಿಡೋದು ಅವರಿಗೆ ಬಿಟ್ಟದ್ದು. ಬಂದರೆ ಅಟೆಂಡೆನ್ಸ್‌ ಹಾಕ್ತೀನಿ, ಇಲ್ಲಾ ಆಬ್ಸೆಂಟ್‌ ಹಾಕ್ತೀನಿ. ಆರೋಗ್ಯ ಸಮಸ್ಯೆ ಇದ್ದಲ್ಲಿ ತಿಳಿಸಲಿ. ಇಲ್ಲವಾದಲ್ಲಿ ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು.

ವಿಶ್ವಾಸಮತ ಪ್ರಕ್ರಿಯೆ ನಡೆಯೋದು ಹೇಗೆ?

ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಯ ನಿರ್ಣಯ ಮಂಡಿಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಮೊದಲು ಆಡಳಿತ ಪಕ್ಷಕ್ಕೆ ವಿಶ್ವಾಸ ಮಂಡನೆಗೆ ಅವಕಾಶ ನೀಡಲಾಗುವುದು. ನಂತರ ವಿರೋಧ ಪಕ್ಷಕ್ಕೆ ಅವಕಾಶ ನೀಡಲಾಗುವುದು. ವಿಶ್ವಾಸ ಮಂಡನೆ ಮತ ಹಾಕುವ ಮೂಲಕ ನಿರ್ಧಾರ ಮಾಡಲಾಗುತ್ತದೆ. ಪ್ರತಿ ಸಾಲಿನ ಸದಸ್ಯರನ್ನು ನಿಲ್ಲಿಸಿ ಕೈ ಎತ್ತುವ ಮೂಲಕ ತಮ್ಮ ನಿರ್ಧಾರ ತಿಳಿಸಬೇಕಾಗುತ್ತದೆ. ಡಿವಿಷನ್‌ ಬೆಲ್‌ (ಮತ ವಿಭಜನೆಯ ಗಂಟೆ) ಸಂಪೂರ್ಣ ರಿಂಗ್‌ ಆಗುವಷ್ಟರಲ್ಲಿ ಎಲ್ಲಾ ಸದಸ್ಯರು ಹಾಜರಿರಬೇಕು. ಯಾವುದೇ ಕಾರಣಕ್ಕೂ ನಾಳೆಯೇ ವಿಶ್ವಾಸಮತ ನಿರ್ಧಾರ ಮಾಡಲೇಬೇಕೆಂದೇನೂ ಇಲ್ಲ. ಸದನದಲ್ಲಿ ಚರ್ಚೆಯ ವೇಳೆ ಯಾವುದೇ ಅಸಂವಿಧಾನಿಕ ಪದಗಳನ್ನು ಬಳಿಸುವಂತಿಲ್ಲ. ಚರ್ಚೆ ಪ್ರಾರಂಭವಾದ ನಂತರ ಮುಖ್ಯದ್ವಾರದ ಬಾಗಿಲನ್ನು ಮುಚ್ಚಲಾಗುತ್ತದೆ. ತಡವಾಗಿ ಬಂದ ಯಾವುದೇ ಸದಸ್ಯರಿಗೆ ಅವಕಾಶ ಇರುವುದಿಲ್ಲ. ಕೊನೆಯದಾಗಿ ಫಲಿತಾಂಶ ಪ್ರಕಟವಾಗಲಿದೆ.