ಬೆಂಗಳೂರು :  ರೈತರ ಸಾಲಮನ್ನಾ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಸಾಲಮನ್ನಾ ಯೋಜನೆಯನ್ನು ಜಾರಿಗೊಳಿಸುವುದರಲ್ಲಿ ರೈತರು ಯಾವುದೇ ಅನುಮಾನ ಪಡಬೇಕಾದ ಅಗತ್ಯ ಇಲ್ಲ. 

ಸಾಲ ಮನ್ನಾಗೆ ಸ್ವಲ್ಪ ಸಮಯ ಕೊಡಿ’ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಇದೆ ವೇಳೆ, ‘ಕಬ್ಬು ರೈತರ ಬಾಕಿ ಪಾವತಿ ವಿಷಯ ಸಂಕೀರ್ಣವಾಗಿದ್ದು ಬೆಳಗಾವಿಯಲ್ಲಿ ಮತ್ತೊಮ್ಮೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ಯಾವುದಕ್ಕೂ ನನಗೆ ಸ್ವಲ್ಪ ಕಾಲಾವಕಾಶ ಕೊಡಿ’ ಎಂದು ಕೋರಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರೈತ ಮುಖಂಡರೊಂದಿಗೆ ಸಭೆ ನಡೆಸಿದರು. ಈ ವೇಳೆ ಕುಮಾರಸ್ವಾಮಿ ರೈತರಿಗೆ ಸಹಕರಿಸುವಂತೆ ಕೋರಿದರು.

‘ರೈತರ ಸಾಲಮನ್ನಾ ಯೋಜನೆಯನ್ನು ವೈಜ್ಞಾನಿಕ ರೀತಿಯಲ್ಲಿ ಜಾರಿಗೊಳಿಸುವ ಉದ್ದೇಶವಿದೆ. ಇದಕ್ಕಾಗಿ ಇರುವ ತಾಂತ್ರಿಕ ಅಡಚಣೆಗಳನ್ನು ಬಗೆಹರಿಸುತ್ತಿದ್ದೇವೆ. ಹಾಗಾಗಿ, ಸ್ವಲ್ಪ ವಿಳಂಬವಾಗುತ್ತಿದೆಯೇ ಹೊರತು, ಸರ್ಕಾರದಲ್ಲಿ ಹಣವಿಲ್ಲದೆ ಅಲ್ಲ. ಇನ್ನು, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನಪ್ರತಿನಿಧಿಗಳೇ ಸಕ್ಕರೆ ಕಾರ್ಖಾನೆ ಮಾಲಿಕರಾಗಿದ್ದಾರೆ. ಅವರು ಬಾಕಿ ಪಾವತಿಸದಿದ್ದರೂ, ಬೆಳೆಗಾರರು ಕಬ್ಬು ಅರೆದರೆ ಸಾಕು ಎಂದು ಸಕ್ಕರೆ ಕಾರ್ಖಾನೆಗೆ ಒಯ್ಯುತ್ತಿದ್ದಾರೆ. ಬಳಿಕ ಬಾಕಿ ಬಂದಿಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ವಿಷಯ ಸಂಕೀರ್ಣವಾಗಿದ್ದು ಬೆಳಗಾವಿಯಲ್ಲಿ ಮತ್ತೊಮ್ಮೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ಯಾವುದಕ್ಕೂ ನನಗೆ ಸ್ವಲ್ಪ ಕಾಲಾವಕಾಶ ಕೊಡಿ’ ಎಂದು ಕೋರಿದರು.

‘ಮೊದಲ ಹಂತದಲ್ಲಿ 2 ಲಕ್ಷ ರು.ವರೆಗಿನ ಸಾಲ ಮನ್ನಾದಲ್ಲಿ 50 ಸಾವಿರ ರು. ಮನ್ನಾ ಮಾಡಲು ಬ್ಯಾಂಕ್‌ಗಳೊಂದಿಗೆ ಚರ್ಚೆ ನಡೆದಿದೆ. ಇದಕ್ಕೆ ಅಗತ್ಯವಿರುವ 6,500 ಕೋಟಿ ರು. ಸರ್ಕಾರದ ಬಳಿ ಇದೆ. ಹೀಗಾಗಿ ಯಾವ ರೈತರೂ ಹೆದರುವ ಅಗತ್ಯವಿಲ್ಲ. ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಬೆಳಗಾವಿಯಲ್ಲಿ ಮತ್ತೊಂದು ಹಂತದ ರೈತರ ಸಭೆ ನಡೆಲಾಗುವುದು’ ಎಂದರು.

‘ಸಾಲಮನ್ನಾ ಯೋಜನೆಯು ಮಧ್ಯವರ್ತಿಗಳಿಗೆ ಲಾಭವಾಗಬಾರದು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸಲಾಗುತ್ತಿದೆ. ಮಧ್ಯವರ್ತಿಗಳು ಹಣ ಲಪಟಾಯಿಸಿದರೆ ಅದರಿಂದ ಯಾರಿಗೆ ಸಮಸ್ಯೆಯಾಗಲಿದೆ? ಅಲ್ಲದೇ, ಯಾರಾದರೂ ನ್ಯಾಯಾಲಯದಲ್ಲಿ ಪಿಐಎಲ್‌ ಹಾಕಿದರೆ ಉತ್ತರ ಕೊಡುವವರು ಯಾರು? ಆಗ ಕೋರ್ಟ್‌ ಕಟಕಟೆಯಲ್ಲಿ ‘ಹಾಜರಾಗಿದ್ದೇನೆ ಸ್ವಾಮಿ’ ಎಂದು ಕೈ ಕಟ್ಟಿನಾನು ನಿಲ್ಲಬೇಕು. ನೀವಲ್ಲ ನಿಲ್ಲುವುದು’ ಎಂದು ಖಾರವಾಗಿ ಹೇಳಿದರು.

ಇದೇ ವೇಳೆ ರೈತ ಮುಖಂಡರೊಬ್ಬರು ಮುಖ್ಯಮಂತ್ರಿ ವಿರುದ್ಧ ಮುಗಿಬಿದ್ದ ಪ್ರಸಂಗ ನಡೆಯಿತು. ‘ಚುನಾವಣೆಗೂ ಮುನ್ನ ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು. ಸರ್ಕಾರ ಬಂದು 24 ಗಂಟೆಯಲ್ಲಿ ಸಾಲಮನ್ನಾ ಎಂದು ಹೇಳಿದ್ದರು. ಆದರೆ, ಇನ್ನೂ ಸಾಲಮನ್ನಾವಾಗಿಲ್ಲ ಎಂದು ಮುಖ್ಯಮಂತ್ರಿಗಳ ವಿರುದ್ಧ ಹರಿಹಾರಿಯ್ದರು. ರಾಜ್ಯದ ಮೂಲೆ ಮೂಲೆಯಿಂದ ನಮ್ಮನ್ನು ಕರೆಸಲಾಗಿದೆ. ಆದರೆ, ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ. ಎಷ್ಟೊತ್ತಾದರೂ ಸರಿಯೇ ಸಮಸ್ಯೆ ಪರಿಹರಿಸಬೇಕು. ಅಲ್ಲದೇ. ಹಣಕ್ಕೆ ಸಮಸ್ಯೆ ಇಲ್ಲ ಎಂದು ಹೇಳುತ್ತೀರಿ. ಆದರೆ, ದುಡ್ಡೇ ಬರುತ್ತಿಲ್ಲ ಎಂದು ಸಹ ಹೇಳುತ್ತೀರಲ್ಲ’ ಎಂದು ಪ್ರಶ್ನಿಸಿದರು.

ನಾನು ಒಬ್ಬರ ಹಂಗಿನಲ್ಲಿದ್ದೇನೆ - ಸಿಎಂ ಅಸಹಾಯಕತೆ

ಸರ್ಕಾರದ ಆಸ್ತಿ ಮಾರಾಟ ಮಾಡಿ ಸಾಲಮನ್ನಾ ಮಾಡಬೇಕಾದ ಅಗತ್ಯ ನನಗಿಲ್ಲ. ಆದರೆ, ನಾನು ಒಬ್ಬರ ಹಂಗಿನಲ್ಲಿದ್ದೇನೆ. ಇದನ್ನು ರಾಜ್ಯದ ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ರೈತ ಮುಖಂಡರೊಂದಿಗಿನ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಳಲನ್ನು ತೋಡಿಕೊಂಡರು.

‘ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ನನ್ನ ಮೊದಲ ಆದ್ಯತೆ. ಅವರು ಬೆಳೆದ ಬೆಳೆಗೆ ಲಾಭ ಸಿಗುವುದು ಮತ್ತು ಸಾಲ ಇಲ್ಲದೆ ಜೀವನ ಸಾಗಿಸುವಂತೆ ಮಾಡುವುದು ಪ್ರಮುಖ ಉದ್ದೇಶವಾಗಿದೆ. ರೈತ ಮೃತಪಟ್ಟವಿಷಯ ತಿಳಿದರೆ ಮನೆಯಲ್ಲಿ ಕುಳಿತು ಕಣ್ಣೀರು ಹಾಕುತ್ತೇನೆ’ ಎಂದು ಬಾವೋದ್ವೇಗಕ್ಕೊಳಗಾಗಿ ನುಡಿದರು.