ಬೆಂಗಳೂರು[ಜೂ.26]: ಯಾದಗಿರಿ ಜಿಲ್ಲೆಯ ಚಂಡರಕಿ ಮೂಲಕ 2ನೇ ಹಂತದ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಗ್ರಾಮಸ್ಥರ ಕುಂದು-ಕೊರತೆ ಆಲಿಸಿ, ರಾತ್ರಿ ಶಾಲೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮುಖ್ಯಮಂತ್ರಿಗಳ ಸ್ವಾಗತಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ

ಮಂಗಳವಾರ ರಾತ್ರಿ 8.45ಕ್ಕೆ ಬೆಂಗಳೂರಿನಿಂದ ಉದ್ಯಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿರುವ ಮುಖ್ಯಮಂತ್ರಿ ಬುಧವಾರ ಬೆಳಗ್ಗೆ 5.18ಕ್ಕೆ ರಾಯಚೂರಿಗೆ ಆಗಮಿಸಲಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಕೆಲಕಾಲ ವಿಶ್ರಾಂತಿ ಪಡೆದು, ಬೆಳಗ್ಗೆ ೮ಕ್ಕೆ ವಿಶೇಷ ಸಾರಿಗೆ ಬಸ್ ಮೂಲಕ ಮಾನ್ವಿ ತಾಲೂಕಿನ ಕರೇಗುಡ್ಡಕ್ಕೆ ತೆರಳಲಿದ್ದಾರೆ. ಅಲ್ಲಿ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಜನತಾದರ್ಶನ ನಡೆಸಲಿದ್ದಾರೆ

ಸಂಜೆ 3.30 ರಿಂದ 2.30ರವರೆಗೆ ರೈತರಿಗೆ ಮಾಹಿತಿ, ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲಾ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಭೋಜನ ಮಾಡಿ ನಂತರ ರಾತ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡುವರು. ಗುರುವಾರ ಬೆಳಗ್ಗೆ 8.30ಕ್ಕೆ ಹೆಲಿಕಾಪ್ಟರ್ ಮೂಲಕ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಿಳಾಂಬ ಗ್ರಾಮಕ್ಕೆ ತೆರಳಿ ವಾಸ್ತವ್ಯ ಹೂಡಲಿದ್ದಾ

ದೋಸ್ತಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರ ಎರಡನೇ ಗ್ರಾಮ ವಾಸ್ತವ್ಯ ಇದಾಗಿದ್ದು, ಇದಕ್ಕೂ ಮೊದಲು ಕಲಬುರಗಿ ಜಿಲ್ಲೆಯ ಹೆರೂರ(ಬಿ) ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಮಳೆಯ ಕಾರಣದಿಂದಾಗಿ ಮುಂದೂಡಲಾಗಿತ್ತು.

₹73.99 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ:

ಜನತಾ ದರ್ಶನ ಕಾರ್ಯಕ್ರಮದ ವೇಳೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾನ್ವಿ ತಾಲೂಕು ವ್ಯಾಪ್ತಿಯ ₹73.99 ಲಕ್ಷ ವೆಚ್ಚದ 30 ಕಾಮಗಾರಿಗಳಿಗೆ ಶಂಕುಸ್ಥಾಪನೆ, ಚಾಲನೆ ನೀಡಲಿದ್ದಾರೆ. ಸಚಿವರಾದ ವೆಂಕಟರಾವ್ ನಾಡಗೌಡ, ಸಾ.ರಾ.ಮಹೇಶ್, ಬಂಡೆಪ್ಪ ಖಾಶೆಂಪೂರ, ಡಾ. ರಾಜಶೇಖರ್ ಪಾಟೀಲ್, ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸಿಎಂ ತಂಗುವ ಶಾಲೆಗೆ ಸಿಂಗಾರ

ಸ್ವತಃ ಮುಖ್ಯಮಂತ್ರಿ ಅವರೇ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕರೇಗುಡ್ಡದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಗ್ರಾಮದ ಮನೆ ಮನೆಗಳನ್ನು ಸಿಂಗರಿಸಲಾಗಿದ್ದು, ರಸ್ತೆ, ವಿದ್ಯುತ್ ವ್ಯವಸ್ಥೆ ದುರಸ್ತಿಗೊಳಿಸಲಾಗಿದೆ. ಮುಖ್ಯಮಂತ್ರಿ ರಾತ್ರಿ ಕಳೆಯಲಿರುವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಿಟಕಿಗಾಜುಗಳನ್ನು ರಿಪೇರಿ ಮಾಡಲಾಗಿದ್ದು, ಸುಣ್ಣ-ಬಣ್ಣ ಹಚ್ಚಿ ಸಿಂಗರಿಸಲಾಗಿದೆ.

ಬೃಹತ್ ವೇದಿಕೆ: ಜನತಾ ದರ್ಶನಕ್ಕಾಗಿ ಗ್ರಾಮದ ಹೊರ ವಲಯದ ೨೨ ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ೩೦ ಸಾವಿರ ಮಂದಿ ಸೇರುವ ನಿರೀಕ್ಷೆ ಇದ್ದು, 10 ಸಾವಿರ ಮಂದಿ ಕೂರಲು ಆಸನಗಳ ವ್ಯವಸ್ಥೆ ಇದೆ. ಜನತಾ ದರ್ಶನಕ್ಕೆ ಮನವಿ ಸಲ್ಲಿಸಲು ಮಹಿಳೆಯರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.