ಬೆಂಗಳೂರು :  ಜನತೆಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಹೋಬಳಿ ಮಟ್ಟದಲ್ಲಿ ಕಡ್ಡಾಯವಾಗಿ ಕಂದಾಯ ಅದಾಲತ್‌, ಪಿಂಚಣಿ ಅದಾಲತ್‌ ನಡೆಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನದಲ್ಲಿ ಹಲವು ಸೂಚನೆಗಳನ್ನು ನೀಡಿದರು. ರಾಜ್ಯದಲ್ಲಿ ಸತತವಾಗಿ ಬರಗಾಲ ತಲೆದೋರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಅಂತರ್ಜಲ ಮಟ್ಟಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಂದೋಲನದ ಮಾದರಿಯಲ್ಲಿ ರೂಪಿಸಬೇಕು. ಮಳೆ ನೀರು ಸಂಗ್ರಹಣೆಗೆ ಆದ್ಯತೆ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಡಿಯೂ ಇಂತಹ ಕಾಮಗಾರಿಗಳಿಗೆ ಉತ್ತೇಜನ ನೀಡಬೇಕು. ನೀರಿನ ಕೊರತೆ ಕಂಡುಬಂದಲ್ಲಿ ಹೆಚ್ಚು ನೀರಿರುವ ಕೊಳವೆ ಬಾವಿಗಳನ್ನು ಗುರುತಿಸಿ, ಮಾಲಿಕರೊಂದಿಗೆ ಮುಂಚಿತವಾಗಿಯೇ ಒಪ್ಪಂದ ಮಾಡಿಕೊಳ್ಳುವಂತೆ ಸೂಚಿಸಿದರು.

ಎಸ್‌ಡಿಆರ್‌ಎಫ್‌ ಮಾರ್ಗಸೂಚಿಗಳಲ್ಲಿ ಹಲವು ನಿಬಂಧನೆಗಳನ್ನು ಸಡಿಲಗೊಳಿಸಲಾಗಿದೆ. ಆದ್ದರಿಂದ ಅನುಮೋದನೆಯಾಗಿರುವ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ, ಅನುದಾನ ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಲಾಯಿತು. ಆದರೆ, ನೀರಿನ ಸಮಸ್ಯೆ ಪರಿಹಾರಕ್ಕೆ ಕೊಳವೆ ಬಾವಿ ಕೊರೆಯುವುದು ಕಟ್ಟಕಡೆಯ ಆಯ್ಕೆಯಾಗಿರಬೇಕು. ಟ್ಯಾಂಕರ್‌ ನೀರು ಪೂರೈಕೆ ಬಿಲ್ಲುಗಳನ್ನು 15 ದಿನದೊಳಗೆ ಪಾವತಿಸಬೇಕು. ಒಂದೇ ಅವಧಿಯ ಬಿಲ್ಲುಗಳು ಮತ್ತೆ ಸಲ್ಲಿಕೆಯಾದರೆ ಗ್ರಾಮ ಪಂಚಾಯತಿಯ ಅನುದಾನದಿಂದಲೇ ವೆಚ್ಚ ಭರಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಟ್ಯಾಂಕರುಗಳಿಗೆ ಜಿಪಿಎಸ್‌ ಅಳವಡಿಕೆ ಕಡ್ಡಾಯ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.

ಕೇಂದ್ರ ಸರ್ಕಾರ 2018ರ ಮುಂಗಾರು ಹಂಗಾಮಿಗೆ 949 ಕೋಟಿ ರು. ಪರಿಹಾರ ಬಿಡುಗಡೆ ಮಾಡಿದೆ. ಈವರೆಗೆ 651 ಕೋಟಿ ರು. ಇನ್‌ಪುಟ್‌ ಸಬ್ಸಿಡಿ ಪಾವತಿ ಮಾಡಲಾಗಿದೆ. ಇನ್ನು 4-5 ದಿನದಲ್ಲಿ ಬಾಕಿ ಮೊತ್ತ ಪಾವತಿಗೆ ಕ್ರಮ ವಹಿಸಬೇಕು. ಮನೆ ಮನೆ ಸಮೀಕ್ಷೆ ನಡೆಸಿ, ವೃದ್ಧಾಪ್ಯ ವೇತನ ನೀಡುವ ಯೋಜನೆ ಯಶಸ್ವಿಗೊಳಿಸಬೇಕು ಎಂದರು.

ಭೂಪರಿವರ್ತನೆ ಮತ್ತಿತರ ಕಂದಾಯ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಕೈಗಾರಿಕೆಗಳಿಗೆ ಭೂ ಪರಿವರ್ತನೆ ಮಾಡಿಕೊಡುವ ವಿಚಾರದಲ್ಲಿ ಅರ್ಜಿದಾರರಿಗೆ ಕಿರುಕುಳ ನೀಡಬೇಡಿ. ಸರ್ಕಾರಿ ಶಾಲೆ, ಆಟದ ಮೈದಾನ, ಸ್ಮಶಾನ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ ಮುಂದಿನ 10 ವರ್ಷಗಳ ಅವಧಿಗೆ ಅಗತ್ಯ ಇರುವ ಜಮೀನನ್ನು ಈಗಲೇ ನಿಗದಿಪಡಿಸಿ ಆದೇಶ ಹೊರಡಿಸಬೇಕು. ಸ್ವಚ್ಛಮೇವ ಜಯತೆ ಕಾರ್ಯಕ್ರಮದಡಿ ಘನ ತಾಜ್ಯ ವಿಲೇವಾರಿಯನ್ನು ಅಕ್ಟೋಬರ್‌ ತಿಂಗಳೊಳಗೆ ಅನುಷ್ಠಾನಗೊಳಿಸಬೇಕು. ಜಲಾಮೃತ ಯೋಜನೆಯಡಿ ರೈತರ ಸಹಭಾಗಿತ್ವದಲ್ಲಿ ಕೆರೆಗಳ ಹೂಳೆತ್ತಲು ಯಂತ್ರದ ವೆಚ್ಚ ಭರಿಸಲು ಅವಕಾಶ ಇದೆ. ಇದಕ್ಕಾಗಿ 100 ಕೋಟಿ ರು. ಅನುದಾನ ಲಭ್ಯ ಇದೆ. ಹೂಳನ್ನು ರೈತರು ತೆಗೆದುಕೊಂಡು ಹೋಗಬಹುದು. ಈ ಸಂಬಂಧ ಪ್ರಸ್ತಾವನೆಗಳನ್ನು ಸಲ್ಲಿಸಲು ತಿಳಿಸಿದರು.

ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ತಿಗಳ ಆವರಣದಲ್ಲಿ ಗಿಡ ನೆಡಬೇಕು. ಜೂ.20ರೊಳಗೆ ಗ್ರಾಮ ಪಂಚಾಯತಿ ಕ್ರಿಯಾಯೋಜನೆಗಳನ್ನು ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆಯಡಿ 342 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸ್ವಂತ ಕಟ್ಟಡಕ್ಕೆ ನಿವೇಶನ ಗುರುತಿಸಲು ಮತ್ತು ಮುಂದಿನ ಎರಡು ವರ್ಷದಲ್ಲಿ ‘ಸಿ’ ವರ್ಗದಲ್ಲಿರುವ ವಿದ್ಯಾರ್ಥಿನಿಲಯಗಳನ್ನು ‘ಎ’ ವರ್ಗಕ್ಕೆ ತರಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಇತರೆ ಸಚಿವರು, ಅಧಿಕಾರಿಗಳು ಭಾಗವಹಿಸಿದ್ದರು.