ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಸುಳಿವೊಂದನ್ನು ನೀಡಿದ್ದಾರೆ. ಶೀಘ್ರದಲ್ಲೇ ಕರ್ನಾಟನ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು ಈ ವೇಳೆ ಕೆಲವರಿಗೆ ಕೋಕ್ ನೀಡುವ ಸಾಧ್ಯತೆ ಇದೆ.
ಬಾಗಲಕೋಟೆ/ಹುಬ್ಬಳ್ಳಿ : ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲವು ಸಚಿವರಿಗೆ ಕೊಕ್ ನೀಡುವ ಸಾಧ್ಯತೆಗಳ ಬಗ್ಗೆ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಸಚಿವ ಸಂಪುಟ ವಿಸ್ತರಣೆ ಆಗಬಹುದು ಇಲ್ಲವೇ ಸರ್ಜರಿಯೂ ಆಗಬಹುದು ಹೇಳಿರುವುದು ಈ ಮಾತಿಗೆ ಇಂಬು ನೀಡಿದೆ.
ಬಾದಾಮಿ ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕಂತೂ ಡಿ.22ರಂದು ಸಂಪುಟ ವಿಸ್ತರಣೆ ಮಾಡಬೇಕು ಎಂದು ನಿರ್ಧರಿಸಲಾಗಿದ್ದು, ಈ ವೇಳೆ ಒಂದಿಬ್ಬರು ಸಚಿವರಿಗೆ ಕೊಕ್ ನೀಡುವ ಸಾಧ್ಯತೆಗಳಿವೆ ಎಂದರು. ಆದರೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಬಿಟ್ಟು ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಸಚಿವ ಸಂಪುಟ ವಿಸ್ತರಣೆ ಆಗಬಹುದು ಇಲ್ಲವೇ ಸರ್ಜರಿಯೂ ಆಗಬಹುದು. ಈ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ತಿಳಿಸಿದರು. ಕೆಲವರನ್ನು ಸಮಾಧಾನಪಡಿಸುವ ಉದ್ದೇಶದಿಂದ ಸಂಪುಟ ವಿಸ್ತರಣೆ ಮಾಡುತ್ತಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದೇವೆ. ಈ ವೇಳೆ ಪ್ರಾಂತ, ಜಾತಿ, ಜನಾಂಗದ ಮೇಲೆ ಪ್ರಾತಿನಿಧ್ಯ ನೀಡಲಾಗುವುದು. ಎಲ್ಲವೂ ಡಿ.22ಕ್ಕೆ ಗೊತ್ತಾಗಲಿದೆ ಎಂದು ಹೇಳಿದರು.
ಉ.ಕ.ಗೆ ಅನ್ಯಾಯವಿಲ್ಲ: ಉತ್ತರ ಕರ್ನಾಟಕದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ವಿಸ್ತರಣೆ ವೇಳೆ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು ಎಂದು ತಿಳಿಸಿದ ಅವರು ಆ ಭಾಗದ ಸಚಿವ ಆಕಾಂಕ್ಷಿಗಳಿಗೆ ಅನ್ಯಾಯವಾಗಲು ಬಿಡೋಲ್ಲ ಎಂದರು.
ಸಿದ್ದು ಗರಂ: ಮಂಗಳವಾರ ನಡೆದ ಸಿಎಲ್‌ಪಿ ಸಭೆಯ ನಂತರ ಕೆಲವು ಸಚಿವರಿಗೆ ಕೊಕ್ ನೀಡುವ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಪ್ರಸ್ತಾಪಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆಗ ಸಿದ್ದರಾಮಯ್ಯ ಅವರು, ‘ನಾನೇನು ಗುಂಡೂರಾವ್ ಅವರ ನಾಲಿಗೇನಾ? ಅವರ ಹೇಳಿಕೆಗೆ ನನ್ನನ್ಯಾಕೆ ಕೇಳುತ್ತೀರಿ? ಅವರನ್ನೇ ಕೇಳಿ’ ಹೇಳಿದರು.
ಪುನಾರಚನೆ ಆದರೆ ಕೊಕ್ ಸಾಧ್ಯತೆ
- ಅರಣ್ಯ ಸಚಿವ ಆರ್.ಶಂಕರ್
- ಕಾರ್ಮಿಕ ಸಚಿವ ವೆಂಕಟರಮಣಪ್ಪ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ
ಹೈಕಮಾಂಡ್ ಹೇಳಿದರೆ ಕೊಕ್ ಸಾಧ್ಯತೆ
- ಕಂದಾಯ ಸಚಿವ ಆರ್.ವಿ.ದೇಶಪಾಂಡೆ
- ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
ಸದ್ಯಕ್ಕಂತೂ ಡಿ.22ರಂದು ಸಂಪುಟ ವಿಸ್ತರಣೆ ಮಾಡಬೇಕು ಎಂದು ನಿರ್ಧರಿಸಲಾಗಿದ್ದು, ಈ ವೇಳೆ ಒಂದಿಬ್ಬರು ಸಚಿವರಿಗೆ ಕೊಕ್ ನೀಡುವ ಸಾಧ್ಯತೆಗಳಿವೆ.
- ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ನಾಯಕ
ಸಂಪುಟ ವಿಸ್ತರಣೆ ಆಗಬಹುದು ಇಲ್ಲವೇ ಸರ್ಜರಿಯೂ ಆಗಬಹುದು. ಕೆಲವರನ್ನು ಸಮಾಧಾನಪಡಿಸುವ ಉದ್ದೇಶದಿಂದ ಸಂಪುಟ ವಿಸ್ತರಣೆ ಮಾಡುತ್ತಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಂಪುಟ ವಿಸ್ತರಣೆ ಮಾಡುತ್ತಿದ್ದೇವೆ. ಈ ವೇಳೆ ಪ್ರಾಂತ, ಜಾತಿ, ಜನಾಂಗದ ಮೇಲೆ ಪ್ರಾತಿನಿಧ್ಯ ನೀಡಲಾಗುವುದು.- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
