Asianet Suvarna News Asianet Suvarna News

15 ಮಂದಿಗೆ ಸಚಿವ ಸ್ಥಾನ : ಇಲ್ಲಿದೆ ಸಂಭಾವ್ಯರ ಪಟ್ಟಿ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ಮೊದಲ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಸಂಭಾವ್ಯರ ಪಟ್ಟಿಯೂ ಇಲ್ಲಿದೆ. 

Karnataka cabinet expansion on August 20
Author
Bengaluru, First Published Aug 18, 2019, 7:39 AM IST

ಬೆಂಗಳೂರು [ಆ.18]:  ಸಾಕಷ್ಟುಕುತೂಹಲ ಮತ್ತು ನಿರೀಕ್ಷೆ ಮೂಡಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ಮೊದಲ ವಿಸ್ತರಣೆಗೆ ಮಂಗಳವಾರ ಮಧ್ಯಾಹ್ನದ ಶುಭ ಗಳಿಗೆ ನಿಗದಿಯಾಗಿದ್ದು, 12ರಿಂದ 15 ಮಂದಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಶನಿವಾರ ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ನಡೆದ ಮುಕ್ಕಾಲು ಗಂಟೆ ಮಾತುಕತೆ ನಂತರ ಈ ತಿಂಗಳ 20ರಂದು (ಮಂಗಳವಾರ) ಸಂಪುಟ ವಿಸ್ತರಣೆ ಮಾಡಲು ಹಸಿರು ನಿಶಾನೆ ದೊರೆತಿದೆ. ಅಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮಧ್ಯಾಹ್ನ ಸಂಪುಟ ವಿಸ್ತರಣೆ ಕೈಗೆತ್ತಿಕೊಳ್ಳುವ ತೀರ್ಮಾನ ಹೊರಬಿದ್ದಿದೆ. ಮಾತುಕತೆ ವೇಳೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರೂ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಯಾವುದೇ ಶಾಸಕರಿಗೂ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಗಿರಿ ಸಿಗುವುದಿಲ್ಲ ಎಂಬುದು ಖಚಿತವಾಗಿದೆ. ಅವರ ರಾಜೀನಾಮೆ ಮತ್ತು ಅನರ್ಹತೆ ಪ್ರಕರಣಗಳು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿರುವುದರಿಂದ ಅವರನ್ನು ಈಗಲೇ ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಸ್ತಾಪ ಇಲ್ಲ.

ಆದರೆ, ಪ್ರಸ್ತುತ ಯಾರೆಲ್ಲ ಸಂಪುಟ ಸೇರಲಿದ್ದಾರೆ ಎಂಬುದರ ನಿಖರ ಮಾಹಿತಿ ಅಂತಿಮಗೊಂಡಿಲ್ಲ. ಯಡಿಯೂರಪ್ಪ ಅವರು ಮೊದಲ ವಿಸ್ತರಣೆಯಲ್ಲಿ ಇಂತಿಂಥವರು ತಮ್ಮ ಸಂಪುಟದಲ್ಲಿರಲಿ ಎಂದು 17 ಮಂದಿ ಶಾಸಕರ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಅಮಿತ್‌ ಶಾ ಅವರ ಕೈಗಿಟ್ಟು ಬಂದಿದ್ದಾರೆ. ಭಾನುವಾರ ಅಥವಾ ಸೋಮವಾರ ನಾವು ಪಟ್ಟಿಅಂತಿಮಗೊಳಿಸಿ ನಿಮಗೆ ಕಳುಹಿಸುತ್ತೇವೆ. ಮುಂದಿನ ಸಿದ್ಧತೆಗಳನ್ನು ಕೈಗೊಳ್ಳಿ ಎಂಬ ಮಾತನ್ನು ಶಾ ಅವರು ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ. ಹೀಗಾಗಿ, ಎಷ್ಟುಮಂದಿಗೆ ಮತ್ತು ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟಕರವಾಗಿದೆ.

BSY-ಶಾ ಭೇಟಿ ಅಂತ್ಯ: ಸಂಪುಟ ರಚನೆಗೆ ಸೋಮವಾರ ಬದಲು ಮತ್ತೊಂದು ಮುಹೂರ್ತ ನಿಗದಿ

ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಮುಂದಿನ ಸಾಲಿನಲ್ಲಿರುವ ಘಟಾನುಘಟಿ ನಾಯಕರನ್ನು ಎದುರಿಸುವುದರ ಜೊತೆಗೆ ತಮ್ಮ ಅನುಭವ ಮತ್ತು ಕೆಲಸದ ಆಧಾರದ ಮೇಲೆ ಬಿಜೆಪಿ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದು ಕೊಡುವಂಥವರು ಸರ್ಕಾರದಲ್ಲಿರಬೇಕು ಎಂಬ ಇಚ್ಛೆ ಅಮಿತ್‌ ಶಾ ಮತ್ತು ಸಂಘ ಪರಿವಾರದ ಮುಖಂಡರಿಗಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೂ ನೆರವಾಗುವಂಥವರನ್ನು ಸಚಿವರನ್ನಾಗಿಸಬೇಕು ಎಂಬ ಉದ್ದೇಶವೂ ಅವರಿಗಿದೆ.

ಆದರೆ, ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಪಾಡುವಂತೆ ವಿಸ್ತರಣೆ ಮಾಡಬೇಕು ಎಂಬ ವಾದವನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರಿಷ್ಠರ ಮುಂದಿಟ್ಟಿದ್ದಾರೆ.

ಹಿರಿಯ ಶಾಸಕರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಆರ್‌.ಅಶೋಕ್‌, ಜೆ.ಸಿ.ಮಾಧುಸ್ವಾಮಿ, ಬಿ.ಶ್ರೀರಾಮುಲು, ಉಮೇಶ್‌ ಕತ್ತಿ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಎಸ್‌.ಸುರೇಶ್‌ಕುಮಾರ್‌, ಸಿ.ಟಿ.ರವಿ, ಅರವಿಂದ್‌ ಲಿಂಬಾವಳಿ, ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ. ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಅವರಿಗೂ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಈ ಪೈಕಿ ಸಿ.ಟಿ.ರವಿ ಮತ್ತು ಲಿಂಬಾವಳಿ ಪೈಕಿ ಒಬ್ಬರನ್ನು ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಪ್ರಸ್ತಾಪವಿರುವುದರಿಂದ ಅಂಥವರನ್ನು ಸಂಪುಟದಿಂದ ಕೈಬಿಟ್ಟರೂ ಆಶ್ಚರ್ಯವಿಲ್ಲ ಎನ್ನಲಾಗಿದೆ.

ಜೊತೆಗೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವಿ.ಸುನೀಲ್‌ಕುಮಾರ್‌, ಎಸ್‌.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಎನ್‌.ರವಿಕುಮಾರ್‌, ಗಾಲಿ ಕರುಣಾಕರ ರೆಡ್ಡಿ, ಪ್ರಭು ಚವಾಣ್‌, ಶಿವನಗೌಡ ನಾಯಕ್‌, ರಾಜೂಗೌಡ, ದತ್ತಾತ್ರೇಯ ಪಾಟೀಲ, ಸಿ.ಸಿ.ಪಾಟೀಲ, ಚಂದ್ರಪ್ಪ, ಅವರ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios