ದೆಹಲಿ/ಬೆಂಗಳೂರು, [ಆ.17]: ಅಂತೂ ಇಂತೂ 3 ವಾರಗಳ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮಂಗಳವಾರ ಮೊದಲ ಹಂತದ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ.  

ಆದ್ರೆ, ಯಾರ್ಯಾರಿಗೆ ಮಂತ್ರಿಸ್ಥಾನ ಅನ್ನೋದು ಮಾತ್ರ ಇನ್ನೂ ಗೌಪ್ಯವಾಗಿಯೇ ಇದೆ. ಇಂದು [ಶನಿವಾರ] ಸಿಎಂ ಯಡಿಯೂರಪ್ಪ ಅವರು ನವದೆಹಲಿಯ ನಾರ್ತ್ ಬ್ಲಾಕ್ ನಲ್ಲಿರುವ ಅಮಿತ್ ಶಾ ಕಚೇರಿಗೆ ಭೇಟಿ ನೀಡಿ ಸಂಪುಟ ವಿಸ್ತರಣೆ ಸಂಬಂಧ ವಿಸ್ತೃತವಾಗಿ ಚರ್ಚೆ ನಡೆಸಿದರು.

BSY ಸಚಿವ ಸಂಪುಟ ವಿಸ್ತರಣೆಗೆ ಹೊಸ ಸೂತ್ರ! ಅವರಿವರಿಗಿಲ್ಲ ಮಂತ್ರಿ ಭಾಗ್ಯ!

ಈ ವೇಳೆ ಯಡಿಯೂರಪ್ಪ ಅವರು ತಾವು ರೆಡಿ ಮಾಡಿಕೊಂಡಿದ್ದ ನೂತನ ಸಚಿವರ ಪಟ್ಟಿಯನ್ನು ಶಾ ಮುಂದಿಟ್ಟು ಸುಮಾರು 45 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿ, ಸಂಪುಟ ರಚನೆಗೆ ಒಪ್ಪಿಗೆ ಪಡೆದುಕೊಂಡರು.

ಹೈಕಮಾಂಡ್ ನಿಂದ ಒಪ್ಪಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಆಗಸ್ಟ್ 20 [ಮಂಗಳವಾರ] ಯಡಿಯೂರಪ್ಪ ಸರ್ಕಾರದ ನೂತನ ಸಚಿವರ ಪದಗ್ರಹ ಸಮಾರಂಭ ನಡೆಯಲಿದೆ. ಈ ಮೊದಲು ಸೋಮವಾರ ಸಂಪುಟ ರಚನೆಯಾಗುವುದು ಪಕ್ಕಾ ಎಂದು ಹೇಳಲಾಗಿತ್ತು. ಆದ್ರೆ ಶಾ ಜತೆ ಮಾತುಕತೆ ನಡೆಸಿದ ಬಳಿಕ ಯಡಿಯೂರಪ್ಪ ಅವರು ಸಚಿವರ ಪ್ರಮಾಣ ವಚನ ಸಮಾರಂಭವನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ.

ಮಂತ್ರಿ ಮಂಡಲದಲ್ಲಿ ಯಾರ್ಯಾರು ಮಂತ್ರಿ ಆಗ್ತಾರೆ ಅನ್ನೋದನ್ನ ಮಾತ್ರ ಅಮಿತ್ ಶಾ ಗೌಪ್ಯವಾಗಿ ಇಟ್ಟಿದ್ದು, ಯಾವುದೇ ತರಹದ ಲಾಬಿ ಹಾಗೂ ಕೋಟಾದಡಿ ಮಂತ್ರಿ ಸ್ಥಾನ ಕೊಡದಿರಲು ಸೂಚಿಸಿದ್ದಾರಂತೆ. 

ಇನ್ನು ಪಕ್ಷ ನಿಷ್ಠೆ ಹಾಗೂ ಸಂಘಟನೆಯಲ್ಲಿ ತೊಡಿಗಿಸಿಕೊಂಡಿರ್ತಾರೋ ಅಂತ ಶಾಸಕರು ಮತ್ತು ಸಾಮಾಜಿಕ ನ್ಯಾಯದಡಿ ಗುರುತಿಸಿಕೊಂಡವರಿಗೆ ಸಚಿವ ಸ್ಥಾನ ನೀಡುತ್ತಾರೆ ಎನ್ನಲಾಗ್ತಿದೆ. ಅಲ್ದೇ ಭ್ರಷ್ಟಚಾರ ಆರೋಪ ಹೊತ್ತವರನ್ನು ದೂರವಿಡಲು ಬಿಎಸ್ ವೈಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಬೆಂಗಳೂರಿನತ್ತ ಬಿಎಸ್ ವೈ
ಸಚಿವ ಸಂಪುಟ ರಚನೆಗೆ ಒಪ್ಪಿಗೆ ಪಡೆದುಕೊಂಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಯಿಂದ ಇಂದು [ಶನಿವಾರ]  ರಾತ್ರಿ 9.15 ವಿಸ್ತಾರ ವಿಮಾನ ಮೂಲಕ ರಾತ್ರಿ 11.55ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇನ್ನು ಸೋಮವಾರ ರಾಜ್ಯಪಾಲ ವಾಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಸಚಿವರ ಹೆಸರುಗಳ ಪಟ್ಟಿ ನೀಡುವ ಎಲ್ಲಾ ಸಾಧ್ಯತೆಗಳಿವೆ.