Asianet Suvarna News Asianet Suvarna News

ಅಕ್ಟೋಬರ್ 10ರ ವೇಳೆಗೆ ರಾಜ್ಯಕ್ಕೆ ಹೊಸ ಸಚಿವರು

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಅ.10ರೊಳಗಾಗಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Karnataka Cabinet Expansion By October 10 Says Dinesh Gundurao
Author
Bengaluru, First Published Sep 27, 2018, 10:43 AM IST
  • Facebook
  • Twitter
  • Whatsapp

ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕಾತಿ ಪ್ರಕ್ರಿಯೆಯನ್ನು ಪಿತೃಪಕ್ಷ ಹಾಗೂ ಮಹಾಲಯ ಅಮಾವಾಸ್ಯೆ ಮುಗಿದ ಬಳಿಕ ಅ.10ರ ಸುಮಾರಿಗೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಅ.10ರೊಳಗಾಗಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಅಕ್ಟೋಬರ್‌ 2ರಂದು ಗಾಂಧಿಜಯಂತಿ ಹಾಗೂ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಬಳಿಕ ರಾಜ್ಯ ನಾಯಕರು ಒಂದು ದಿನ ದೆಹಲಿಗೆ ಭೇಟಿ ನೀಡಿದರೆ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕಾತಿ ಬಗ್ಗೆ ಎಲ್ಲವೂ ಅಂತಿಮವಾಗುತ್ತದೆ. ಹೀಗಾಗಿ ಅ.10ರೊಳಗಾಗಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಪಿತೃಪಕ್ಷದಿಂದಾಗಿ ವಿಳಂಬ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಕ್ಟೋಬರ್‌ 8ರಂದು ಮಹಾಲಯ ಅಮಾವಾಸ್ಯೆ ಇದೆ. ಈ ವೇಳೆ ಪಿತೃಪಕ್ಷವೂ ಮುಗಿಯಲಿದೆ. ಇವೆಲ್ಲವನ್ನೂ ನೋಡಿಕೊಂಡೇ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕ ದಿನಾಂಕ ನಿರ್ಧರಿಸಲಾಗಿದೆ ಎಂದರು.

ಇದಕ್ಕೆ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಕಾರಣವೇ ಎಂದಾಗ, ಹಾಗೇನಿಲ್ಲ ಎಚ್‌.ಡಿ. ರೇವಣ್ಣ ಅವರಿಗಿಂತ ಹೆಚ್ಚಾಗಿ ಜ್ಯೋತಿಷ್ಯ ಹಾಗೂ ಶಾಸ್ತ್ರಗಳನ್ನು ನಂಬುವವರು ಕಾಂಗ್ರೆಸ್ಸಿನಲ್ಲೂ ಇದ್ದಾರೆ. ಕೆಲವು ಕಾರಣಗಳಿಗಾಗಿ ಎಚ್‌.ಡಿ.ರೇವಣ್ಣ ಅವರು ಪ್ರಚಾರ ಪಡೆದುಕೊಂಡಿದ್ದಾರೆ. ಹೀಗಾಗಿಯೇ ಎಲ್ಲವನ್ನೂ ಮುಗಿಸಿಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಆದರೆ, ನಾನು ಅವುಗಳನ್ನೆಲ್ಲಾ ನಂಬುವುದಿಲ್ಲ. ನನ್ನ ಜೀವನದ ಮಹತ್ವದ ಘಟ್ಟಗಳು ಎಲ್ಲಾ ಒಳ್ಳೆಯ ದಿನ, ಶಕುನದಲ್ಲಿ ಆಗಿಲ್ಲ. ಹೀಗಾಗಿ ನಾನೇನೂ ನಂಬುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಲ್‌ಪಿ ಸಭೆಯಲ್ಲಿ ಡಿಸಿಎಂ ವಿರುದ್ಧ ಅಸಮಾಧಾನ?

ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್‌ ಗುಂಡೂರಾವ್‌, ಈ ಸಮ್ಮಿಶ್ರ ಸರ್ಕಾರದ ಮೇಲೆ ಮಾತ್ರವಲ್ಲ. ನಮ್ಮದೇ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೂ ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷದಲ್ಲಿ ಶಾಸಕಾಂಗ ಪಕ್ಷದ ಸಭೆ ಚರ್ಚೆ ನಡೆಸುವುದಕ್ಕಾಗಿಯೇ ಮಾಡುತ್ತೇವೆ. ಬಳ್ಳಾರಿ ವಿಚಾರದಲ್ಲೂ ಯಾವುದೇ ವಿವಾದ ಆಗಿಲ್ಲ. ಶಾಸಕರ ಸಮಸ್ಯೆ ಆಗಲಿಸಿ ಯಾವುದೇ ಕಾರಣಕ್ಕೂ ನಿಮ್ಮ ಹೇಳಿಕೆಗಳನ್ನು ಮಾಧ್ಯಮಗಳ ಮುಂದೆ ಹೇಳಬೇಡಿ, ಇಂತಹ ವಿಷಯಗಳನ್ನು ಆಂತರಿಕವಾಗಿ ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದೇವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಒಗ್ಗಟ್ಟಿನ ಪ್ರದರ್ಶನ ಆಗಿದೆ ಎಂದಷ್ಟೇ ಹೇಳಿದರು.

Follow Us:
Download App:
  • android
  • ios