ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯದವರಿಗೆ ಮತ್ತೊಂದು ಸಚಿವ ಸ್ಥಾನ ಸಿಗಬೇಕಿತ್ತು. ವೈಯಕ್ತಿಕವಾಗಿ ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಅಸಮಾಧಾನ ಇದೆ. ಹಾಗಂತ ನಾನು ಬಿಜೆಪಿಗೆ ಹೋಗುವು​ದಿಲ್ಲ. ಆದರೆ, ನನಗಾಗಿರುವ ಅನ್ಯಾಯವನ್ನು ನಾನು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಪ್ರಮೇಯ ಇಲ್ಲ ಎಂದು ಚಿಕ್ಕ​ಬ​ಳ್ಳಾ​ಪುರ ಶಾಸಕ ಡಾ.ಕೆ. ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕ​ಲಿಗ ಸಮುದಾಯಕ್ಕೆ ಸಚಿವ ಸಂಪು​ಟ​ದಲ್ಲಿ ಪ್ರಾತಿನಿಧ್ಯ ಕಡಿಮೆಯಾದಂತಾಗಿದೆ. ಮೈತ್ರಿ ಸರ್ಕಾರದಲ್ಲಿ ಸದ್ಯ ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಮತ್ತು ಕೃಷ್ಣಬೈರೇಗೌಡ ಇಬ್ಬರು ಮಾತ್ರ ಸಚಿವರಿದ್ದಾರೆ. ಹಾಗಾಗಿ ಇನ್ನೂ ಒಂದು ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕಿತ್ತು. ಆದರೆ, ನೀಡದಿರುವುದರಿಂದ ಸಮುದಾಯಕ್ಕೆ ಪ್ರಾತಿನಿಧ್ಯ ಕಡಿಮೆಯಾದಂತಾಗಿದೆ. ಹಾಗಂತ ಮತ್ತೊಂದು ಸ್ಥಾನವನ್ನು ನಾನೇನು ನನಗೇ ಕೊಡಬೇಕು ಎಂದು ಹೇಳುತ್ತಿಲ್ಲ. ಎಂ.ಕೃಷ್ಣಪ್ಪ, ಎಸ್‌.ಟಿ.ಸೋಮಶೇಖರ್‌ ಅವರಂತಹ ಸಮುದಾಯದ ಹಿರಿಯ ಶಾಸಕರಿಗೆ ನೀಡಬಹುದಿತ್ತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಮುದಾಯದ ಎಲ್ಲ ಶಾಸಕರೂ ಸಭೆ ನಡೆಸುತ್ತೇವೆ. ಹೈಕಮಾಂಡ್‌ನ ಗಮನಕ್ಕೆ ತಂದು ಮತ್ತೊಂದು ಸಚಿವ ಸ್ಥಾನ ಪಡೆಯಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು.

ಅಸಮಾಧಾನಿತ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಯಡಿಯೂರಪ್ಪ ಅವರಿಗೆ ಪರೋಕ್ಷ ಟಾಂಗ್‌ ನೀಡಿದರು.

ರಮೇಶ್‌, ಶಂಕರ್‌ ಕೈಬಿಟ್ಟಿದ್ದು ಸರಿಯಲ್ಲ:

ಆರೇ ತಿಂಗಳಲ್ಲಿ ರಮೇಶ್‌ ಜಾರಕಿಹೊಳಿ ಮತ್ತು ಆರ್‌.ಶಂಕರ್‌ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದು ಸರಿಯಲ್ಲ. ಆರ್‌.ಶಂಕರ್‌ ಮತ್ತು ನಾಗೇಶ್‌ ಇಬ್ಬರೂ ಪಕ್ಷೇತರರಿಗೂ ಮೊದಲೇ ನಿಗಮ- ಮಂಡಳಿ ಸ್ಥಾನ ಕೊಡಬೇಕಿತ್ತು. ಮೈತ್ರಿ ಸರ್ಕಾರದ ರಚನೆಯಲ್ಲಿ ಪಕ್ಷೇತರ ಶಾಸಕರ ಪಾತ್ರವೂ ಇದೆ. ಇನ್ನು ಎಂ.ಟಿ.ಬಿ ನಾಗರಾಜ್‌ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು ನನಗೇ ಸಿಕ್ಕಿದಷ್ಟುಸಂತೋಷವಾಗಿದೆ. ಮೊದಲೇ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು ಎಂದರು.

ಪರಿ​ಸರ ವಿಜ್ಞಾನ, ಜೈವಿಕ ವಿಜ್ಞಾನ ನನ್ನ ಆಸ​ಕ್ತಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡಿರುವ ಕುರಿತು ಮಾತನಾಡಿ, ನಾನೊಬ್ಬ ಎಂಬಿಬಿಎಸ್‌ ಡಾಕ್ಟರ್‌. ಫೆäರೆನ್ಸಿಕ್‌, ಜೈವಿಕ ವಿಜ್ಞಾನ, ಪರಿಸರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಪರಿಸರ ವಿಜ್ಞಾನದಲ್ಲಿ ನನಗೆ ವಿಶೇಷ ಆಸಕ್ತಿಯಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನನಗಿಂತಲೂ ಅರ್ಹತೆ ಇರೋರು ಬೇಕಾ? ಅಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ಮಾರ್ಗಸೂಚಿಯಲ್ಲಿ ಹೇಳಿರುವ ಅರ್ಹತೆಗಳು ನನಗಿವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್‌ ಹೈಕಮಾಂಡ್‌ ನನಗೆ ಆ ಸ್ಥಾನ ನೀಡಲು ಒಪ್ಪಿದೆ. ಯಾರಿಗಾದರೂ ಈ ಬಗ್ಗೆ ಆಕ್ಷೇಪ ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದರು.