ಬೆಂಗಳೂರು [ಜು.26]: ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಉಪಚುನಾವಣೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಕುರಿತು ಗಂಭೀರವಾಗಿ ಚರ್ಚೆ ನಡೆದಿದೆ. 

ಲೋಕಸಭೆಯಲ್ಲಿ ಸೋಲನುಭವಿಸಿದ ನಿಖಿಲ್‌ ಕುಮಾರಸ್ವಾಮಿ ಅವರನ್ನು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸುವ ಮೂಲಕ ರಾಜಕೀಯ ಜೀವನಕ್ಕೆ ಹಾದಿ ಮಾಡಿಕೊಡುವ ಉದ್ದೇಶ ಇದೆ ಎಂದು ಹೇಳಲಾಗಿದೆ.

ಮಹಾಲಕ್ಷ್ಮೇ ಲೇಔಟ್‌ ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಶಾಸಕರಾಗಿರುವ ಗೋಪಾಲಯ್ಯ ಬೆನ್ನಿಗೆ ಚೂರಿ ಹಾಕಿರುವ ಭಾವನೆ ಪಕ್ಷದಲ್ಲಿದೆ. ಹೀಗಾಗಿ ಗೋಪಾಲಯ್ಯ ಅಥವಾ ಆತನ ಬೆಂಬಲಿಗರು ಯಾರೇ ಕಣಕ್ಕಿಳಿದರೂ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಲು ಜೆಡಿಎಸ್‌ ಪಣತೊಟ್ಟಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ತಯಾರಿ ಆರಂಭಿಸಿದೆ ಎಂಬ ಮಾತುಗಳು ಕೇಳಿಬಂದಿವೆ. 

ಅಂತೆಯೇ ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ.ಸೋಮಶೇಖರ್‌ ಹಾಗೂ ಕೆ.ಆರ್‌.ಪುರ ಕ್ಷೇತ್ರದ ಬೈರತಿ ಬಸವರಾಜ್‌ ಸಹ ಸರ್ಕಾರ ಪತನಗೊಳ್ಳಲು ಪ್ರಮುಖ ಕಾರಣರಾಗಿದ್ದಾರೆ. ಕಾಂಗ್ರೆಸ್‌ನ ಮೈತ್ರಿಯೊಂದಿಗೆ ಚುನಾವಣೆ ಎದುರಿಸುವ ಬದಲು ಏಕಾಂಗಿಯಾಗಿ ಕಣಕ್ಕಿಳಿಯುವ ಉದ್ದೇಶದಿಂದ ಕ್ಷೇತ್ರದಲ್ಲಿ ತಳಮಟ್ಟದಿಂದ ಕೆಲಸ ಮಾಡಿ ನಾಲ್ವರು ಅತೃಪ್ತ ಶಾಸಕರಿಗೆ ತಿರುಗೇಟು ನೀಡುವ ತವಕದಲ್ಲಿದೆ. ಹೀಗಾಗಿ ಸಭೆ ನಡೆಸಿ ಪಕ್ಷವನ್ನು ಈಗಿನಿಂದಲೇ ಬಲಿಷ್ಠಗೊಳಿಸಲು ತಂತ್ರಗಾರಿಕೆಯನ್ನು ದೇವೇಗೌಡ ಅವರು ಹೆಣೆದಿದ್ದಾರೆ ಎಂದು ಹೇಳಲಾಗಿದೆ.