ನೀನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ!| ಸಿದ್ದರಾಮಯ್ಯ ಬಗ್ಗೆ ರಮೇಶ್ ಕುಮಾರ್ ಅನುಕಂಪ
ಬೆಂಗಳೂರು[ಸೆ.23]: ನೀನೇ ಸಾಕಿದಾ ಗಿಣಿ, ನಿನ್ನಾ ಮುದ್ದಿನಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ... ನಿನ್ನ ಹದ್ದಾಗಿ ಕುಕ್ಕಿತಲ್ಲೋ...
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಾನಸ ಸರೋವರ’ ಚಿತ್ರದ ಈ ಹಾಡಿನ ತುಣುಕು ಹಾಡುವ ಮೂಲಕ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿ ಅನರ್ಹಗೊಂಡಿರುವ ಶಾಸಕರನ್ನು ಪರೋಕ್ಷವಾಗಿ ಹದ್ದಿಗೆ ಹೋಲಿಸಿ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾ.ತ.ಚಿಕ್ಕಣ್ಣ ಸಂಪಾದಕತ್ವದ ‘ಸಿದ್ದರಾಮಯ್ಯ ಆಡಳಿತ -ಅಂತರಂಗ ಬಹಿರಂಗ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರೇ ಸಾಕಿದ ಗಿಣಿಗಳು (ಅನರ್ಹ ಶಾಸಕರು) ಹದ್ದಾಗಿ ಕುಕ್ಕಿರುವ ಗುರುತುಗಳು ಇನ್ನೂ ಹಾಗೇ ಇವೆ. ಆ ಗುರುತುಗಳಿಗೆ ಡ್ರೆಸ್ಸಿಂಗ್ ಮಾಡಬೇಕಿದೆ ಎಂದು ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಕಡೆ ನೋಡಿಕೊಂಡೇ ಹೇಳಿದರು. ಅಲ್ಲದೆ, ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಾದ ಸೋಲನ್ನು ಒಂದು ಕೆಟ್ಟಕನಸು ಎಂದು ಮರೆಯಬೇಕು. ಅಸಂಘಟಿತರಾಗಿರುವ ತಮ್ಮ ಅಭಿಮಾನಿಗಳು, ಬೆಂಬಲಿಗರನ್ನು ಸಂಘಟಿಸಿಕೊಂಡು ಮುಂದಿನ ದಾರಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
