ಬೆಂಗಳೂರು[ಸೆ.22]: ಕರ್ನಾಟಕ ಉಪ ಚುನಾವಣೆಗೆ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ರಾಜಕೀಯ ನಾಯಕರ ಮಾತಿನ ಯುದ್ಧ ಜೋರಾಗಿದೆ. ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯರ ಶಿಷ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕಾಂಗ್ರೆಸ್ ನಾಯಕರ ವಿರುದ್ಧ ಕೆಂಡ ಕಾರಿದ್ದಾರೆ. ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿನ ವಿಚಾರವಾಗಿಯೂ ಬಾಯ್ಬಿಟ್ಟಿದ್ದಾರೆ.

ಹೌದು ನಿನ್ನೆ ಶನಿವಾರ ಹೊಸಕೋಟೆಯಲ್ಲಿ ಕಾಂಗ್ರೆಸ್ ಸ್ವಾಭಿಮಾನ ಸಮಾವೇಶ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೃಷ್ಣ ಭೈರೇಗೌಡ ಸೇರಿದಂತೆ ಕಾಂಗ್ರೆಸ್ ನ ನಾಯಕರು ಎಂಟಿಬಿ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಮಾತಿಗೆ ಇಂದು ಪ್ರತಿಕ್ರಿಯಿಸಿರುವ ಎಂಟಿಬಿ ತನ್ನ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಪುತ್ರನನ್ನ ಕುಡಿಸಿ, ಕುಡಿಸಿ ಸಾಯಿಸಿದ್ದೇ ಆ ಬಚ್ಚಾ

ಹೆಬ್ಬಾಳ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್ 'ಸಿದ್ದರಾಮಯ್ಯರ ಮಗ ಇನ್ನೂ 50 ವರ್ಷ ಬದುಕ್ತಿದ್ರು. ಆದ್ರೆ ಹೋಟೇಲ್ ಗೆ ಕರೆದುಕೊಂಡು ಹೋಗಿ ಕುಡಿಸಿ, ಕುಡಿಸಿ ಸಾಯಿಸಿದ್ದೇ ಆ ಬಚ್ಚಾ' ಎನ್ನುವ ಮೂಲಕ ವಿವಾದದ ಕಿಚ್ಚು ಹೊತ್ತಿಸಿದ್ದಾರೆ.

ಸಿದ್ದರಾಮಯ್ಯ ಯಾರನ್ನೂ ಬೆಳೆಸಿಲ್ಲ, ಬಳಸಿಕೊಂಡ್ರು

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧವೂ ಕಿಡಿ ಕಾರಿದ ಎಂಟಿಬಿ 'ನನಗೆ ಟಿಕೆಟ್ ಕೊಟ್ಟು ಮಂತ್ರಿ ಮಾಡಿದೆ ಅಂತ ಸಿದ್ದರಾಮಯ್ಯ ಹೇಳ್ತಾರೆ, ಆದ್ರೆ ಎಷ್ಟು ಜನ ಕುರುಬರನ್ನ ಮಂತ್ರಿ ಮಾಡಿದ್ರು?. ಸಮಾಜದ ಹೆಸರೇಳಿಕೊಂಡು ಕೆಲಸ ಸಾಧಿಸಿಕೊಳ್ತಾರೆ' ಎನ್ನುವ ಮೂಲಕ ಸ್ವಾಭಿಮಾನ ಸಮಾವೇಶದಲ್ಲಿ ಎಂಟಿಬಿ ನಾಗರಾಜ್ ನಾಗರಹಾವು ಎಂದಿದ್ದ ಸಿದ್ದರಾಮಯ್ಯಗೆ ಮಾತಿನ್ಲಲೇ ಛಾಟಿ ಬೀಸಿದ್ದಾರೆ.

ಜೆಡಿಎಸ್ನಲ್ಲಿ ಮದುವೆಯಾಗಿ ಕಾಂಗ್ರೆಸ್ನಲ್ಲಿ ಶೋಭನ 

ಇನ್ನು ಕಾಂಗ್ರೆಸ್‌ಗೆ ತಾಳಿ ಕಟ್ಟಿ ಮತ್ತೊಬ್ಬರ ಜೊತೆ ಸಂಸಾರ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೂ ಟಾಂಗ್ ನೀಡಿರುವ ಎಂಟಿಬಿ 'ಅವರೇನು ಕಾಂಗ್ರೆಸ್ ನಲ್ಲೆ ಮದುವೆ ಆಗಿದ್ರಾ? ಜೆಡಿಎಸ್‌ನಲ್ಲಿ ಮದುವೆಯಾಗಿ ಕಾಂಗ್ರೆಸ್ನಲ್ಲಿ ಶೋಭನ ಮಾಡ್ಕೊಂಡಿದ್ದಾರೆ. ಕರ್ತವ್ಯ ಪ್ರಾಮಾಣಿಕತೆಯ ಮಾತನಾಡುವ ಅವರು 64 ಎಕರೆ ಫಾರೆಸ್ಟ್ ಭೂಮಿ ಕಬಳಿಕೆ ಮಾಡಿದ್ದು ಗೊತ್ತಿಲ್ವಾ ನಮಗೆ?' ಎಂದು ತಿವಿದಿದ್ದಾರೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.