ಮೈಸೂರು[ಸೆ.29]: ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ನಾನೇ ಸ್ಪರ್ಧಿಸುವುದಾಗಿ ಘೋಷಿಸಿರುವ ಅನರ್ಹ ಶಾಸಕ ಎಚ್.ವಿಶ್ವನಾಥ್ ಈ ವಿಚಾರವಾಗಿ ಎದ್ದಿರುವ ಊಹಾಪೋಹಗಳನ್ನು ಅಲ್ಲಗೆಳೆದಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ಲ್ಲಿರುವ ನಮ್ಮ ಅರ್ಜಿ ವಿಚಾರವಾಗಿ ಐತಿಹಾಸಿಕ ತೀರ್ಪು ಬರಲಿದೆ. ಈಗಿನ ಪೀಠದಿಂದ ಸಂವಿಧಾನ ಪೀಠಕ್ಕೂ ನಮ್ಮ ಕೇಸ್ ರವಾನೆಯಾಗಬಹುದು. ಪರಿಸ್ಥಿತಿ ಹೀಗಿರುವಾಗ ಯಾರೋ ತಮ್ಮ ತೆವಲಿಗೆ ಹುಣಸೂರು ಕ್ಷೇತ್ರದ ಟಿಕೆಟ್ ಬೇರೆಯವರಿಗೆ ಘೋಷಣೆಯಾಗಿದೆ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಗೊಂದಲ ಸೃಷ್ಟಿಸುವ ಕೆಲಸ. ಯಾವ ಶಾಸಕನೂ ತಾನು ಗೆದ್ದ ಕ್ಷೇತ್ರವನ್ನು ಯಾರಿಗೂ ಬಿಟ್ಟು ಕೊಡೋಲ್ಲ ಎಂದಿದ್ದಾರೆ.

ಅಲ್ಲದೇ ಬಿಜೆಪಿ ಹೈಕಮಾಂಡ್ ಬಹಳ ಗಟ್ಟಿಯಾಗಿದ್ದು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತದೆ. ಇನ್ನು ಸಿಎಂ ನನ್ನನ್ನ ಮನವೊಲಿಸುವ ಪ್ರಶ್ನೆ ಎಲ್ಲಿಂದ ಬಂತು ಎಂದು ಮರು ಪ್ರಶ್ನೆ ಹಾಕಿದ್ದಾರೆ.