ಡಿಕ್ಕಿ ಹೊಡೆದು 70 ಕಿ.ಮಿ ಶವ ಎಳೆದು ತಂದ ಬಸ್

First Published 5, Feb 2018, 8:14 AM IST
Karnataka bus drags dead man in Undercarriage over 70 km
Highlights

ಶಾಂತಿನಗರ ಒಂದನೇ ಡಿಪೋದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವ, ಅಪಘಾತದಿಂದ ಮೃತಪಟ್ಟಿದ್ದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರು : ಶಾಂತಿನಗರ ಒಂದನೇ ಡಿಪೋದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವ, ಅಪಘಾತದಿಂದ ಮೃತಪಟ್ಟಿದ್ದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಪಘಾತ ನಡೆದ ಸ್ಥಳದಲ್ಲಿ ಬಸ್ ನಿಲ್ಲಿಸದೆ ಬಸ್ ಚಾಲಕ ಬಸ್ ಚಲಾಯಿಸಿ ಕೊಂಡು ಬಂದು, ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾನೆ. ಚಾಲಕ ಮೊಹಿನುದ್ದೀನ್ (42) ವಿರುದ್ಧ ಸಾಕ್ಷ್ಯನಾಶಕ್ಕೆ ಯತ್ನ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ವಶಕ್ಕೆ ಪಡೆಯಲಾಗಿದೆ ಎಂದು ವಿಲ್ಸನ್ ಗಾರ್ಡನ್ ಪೊಲೀಸರು ಹೇಳಿದರು.

ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ರಾತ್ರಿ ವೇಳೆಯಾಗಿದ್ದರಿಂದ ಆತನಿಗೂ ಅಪಘಾತ ನಡೆದ ಸ್ಥಳ ಯಾವುದು ಎಂದು ಗೊತ್ತಾಗಿಲ್ಲ. ಘಟನೆ ನಡೆದ ಸ್ಥಳವನ್ನು ಪತ್ತೆ ಹಚ್ಚಿ ಪ್ರಕರಣವನ್ನು ಅಲ್ಲಿನ ಠಾಣೆಗೆ ವರ್ಗಾಯಿಸುವುದಾಗಿ ತಿಳಿಸಿದರು.

ಮೊಹಿನುದ್ದೀನ್ ರಾತ್ರಿ 12.30ರ ಸುಮಾರಿಗೆ ರಾಮನಗರ ಮತ್ತು ಚನ್ನಪಟ್ಟಣ ಮಧ್ಯೆ ಅಪಘಾತ ನಡೆದಿದ್ದು, ಚಾಲಕ ಬಸ್ ನಿಲ್ಲಿಸದೆ ಬೆಂಗಳೂರಿಗೆ ಬಂದಿದ್ದಾನೆ. ಕೊನೆಯ ನಿಲ್ದಾಣವಾದ ಶಾಂತಿನಗರದಲ್ಲಿ ಪ್ರಯಾಣಿಕರೆಲ್ಲಾ ಇಳಿದ ಬಳಿಕ ಚಾಲಕ ಡಿಪೋ ಬಳಿ ಬಸ್‌ನ ಕೆಳಗೆ ನೋಡಿದಾಗ ವ್ಯಕ್ತಿಯ ಶವ ಇರುವುದನ್ನು ಕಂಡಿದ್ದಾನೆ.

ವ್ಯಕ್ತಿಯ ದೇಹದಲ್ಲಿ ಸಂಪೂರ್ಣ ತರಚಿದ ಗಾಯಗಳಾಗಿತ್ತು. ಬಳಿಕ ಸಿಕ್ಕಿ ಬೀಳುತ್ತೇನೆ ಎಂದು ಆತಂಕದಲ್ಲಿ ಬಸ್‌ ಅನ್ನು ಡಿಪೋ ಒಳಗೆ ತೆಗೆದುಕೊಂಡು ಹೋಗಿದ್ದು, ಬಸ್ ಕೆಳಗೆ ಸಿಲುಕಿದ್ದ ಶವ ಕೆಳಗೆ ಬಿದ್ದಿದೆ. ಬಳಿಕ ಶವವನ್ನು ಇತರ ಎರಡು ಬಸ್‌ಗಳ ನಡುವೆ ಹಾಕಿ ಹೋಗಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

loader