ಕಂಪಾಲಾ[ಸೆ.29]: ಉಗಾಂಡಾ ದೇಶದ ಕಂಪಾಲದಲ್ಲಿ ಶನಿವಾರ ನಡೆದ ೬೪ನೇ ಸಿಪಿಎ ಸಮ್ಮೇಳನದ ‘ಸಾಮಾನ್ಯ ಸಭೆಯಲ್ಲಿ’ ಕರ್ನಾಟಕ ವಿಧಾನಸಭಾ ಅಧ್ಯಕ್ಷ ರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಿಮಾಚಲ ಪ್ರದೇಶ ವಿಧಾನಸಭೆಯ ಸ್ಪೀಕರ್ ರಾಜೀವ್ ಬಿಂದಾಲ್, ಅಸ್ಸಾಂ ವಿಧಾನಸಭೆ ಅಧ್ಯಕ್ಷ ಹಿತೇಂದ್ರನಾಥ ಗೋಸಾಮಿ ಪಾಲ್ಗೊಂಡಿದ್ದರು

ಸಮ್ಮೇಳನದಲ್ಲಿ ಪಾಕಿಸ್ತಾನವು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ, ಭಾರತ ದೇಶ ಜಮ್ಮು- ಕಾಶ್ಮೀರದ ಸದಸ್ಯತ್ವವನ್ನು ಅಮಾನತಿ ನಲ್ಲಿಟ್ಟಿರುವ ವಿಧೇಯಕಕ್ಕೆ ಅನುಮೋದನೆ ನೀಡುವ ವಿಷಯದಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿದೆ. ಜಮ್ಮು- ಕಾಶ್ಮೀರದಲ್ಲಿ ಸೈನಿಕ ಆಡಳಿತ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ ಎಂದು ಆರೋಪಿಸಿತು.

ಈ ಸಮಯದಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಕರ್ನಾಟಕದ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಕಾಶ್ಮೀರದ ವಿಷಯ ಭಾರತದ ಆಂತರಿಕ ಸಂಗತಿ ಮತ್ತು ಭಾರತದ ಪಾರ್ಲಿ ಮೆಂಟ್ ನಿರ್ಣಯ ಕೈಗೊಳ್ಳಲಿದೆ’ ಎಂದರು. ಇದೇ ವೇಳೆ ಮಾತನಾಡಿದ ಹಿಮಾಚಲ ಪ್ರದೇಶ ಸ್ಪೀಕರ್, ರಾಜೀವ್ ಬಿಂದಾಲ್, ಈ ಸಮ್ಮೇಳನದಲ್ಲಿ ಭಾರತದ ಆಂತರಿಕ ವಿಷಯ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದರು.