ರೈತರ ಸಾಲಮನ್ನಾಗೆ ಹೊಸ ಮಾರ್ಗ ಹುಡುಕಿದ ಸಿಎಂ ಕುಮಾರಸ್ವಾಮಿ

Karnataka asks Modi govt to foot 50% of farm loan waiver bill
Highlights

 ರೈತರ ಸಾಲಮನ್ನಾ ಮಾಡಲು ನಾನಾ ದಾರಿ ಹುಡುಕುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಒಟ್ಟು ಸಾಲಮನ್ನಾ ಪೈಕಿ ಶೇ.50 ರಷ್ಟು ಭರಿಸುವಂತೆ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. 

ಬೆಂಗಳೂರು : ರೈತರ ಸಾಲಮನ್ನಾ ಮಾಡಲು ನಾನಾ ದಾರಿ ಹುಡುಕುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಒಟ್ಟು ಸಾಲಮನ್ನಾ ಪೈಕಿ ಶೇ.50 ರಷ್ಟು ಭರಿಸುವಂತೆ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ದೆಹಲಿ ಯಲ್ಲಿ ಭಾನುವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರೈತರ ಕಷ್ಟ, ಸಾಲದ ಹೊರೆ ಇತ್ಯಾದಿಗಳನ್ನು ವಿವರಿಸಿ ಈಗಾಗಲೇ ನಿರ್ಧರಿಸಿರುವ ಸಾಲಮನ್ನಾಕ್ಕೆ ಶೇ.50ರಷ್ಟು ಸಹಕಾರ ನೀಡುವಂತೆ ಕೋರಿದರು. ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೃಷಿ ಬಿಕ್ಕಟ್ಟು ಕೂಡ ಒಂದಾಗಿದ್ದು, ರೈತರ ಸಾಲಮನ್ನಾದ ಬಗ್ಗೆ ಇಡೀ ರಾಜ್ಯ ಎದುರು ನೋಡುತ್ತಿದೆ ಎಂದರು.

ರೈತರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರವು ಸಿದ್ಧವಾಗಿದೆ. ಬರ, ಬೆಳೆಹಾನಿಯಂತಹ ಅನೇಕ ಸಮಸ್ಯೆಯಿಂದಾಗಿ ಕರ್ನಾಟಕದ 85 ಲಕ್ಷ ರೈತರು ಬ್ಯಾಂಕ್‌ಗಳಲ್ಲಿ ಸಾಲ ಹೊಂದಿದ್ದು, ಒಟ್ಟಾರೆ ಸಾಲಮನ್ನಾದ ಪೈಕಿ ಶೇ.50ರಷ್ಟನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂದು ಮನವಿ ಮಾಡಿದರು.

ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟಂತೆ ಕೇಂದ್ರದ ಕಾರ್ಯಕ್ರಮಗಳಿಗಿಂತ ರಾಜ್ಯದ ಯಶಸ್ವಿನಿ ಯೋಜನೆ ಉತ್ತಮವಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರಾಷ್ಟ್ರೀಯ ಸ್ವಾಸ್ಥ್ಯ ಸುರಕ್ಷಾ ಮಿಷನ್ ಯೋಜನೆಯನ್ನು ಸರ್ಕಾರ ಸ್ವಾಗತಿಸುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಿಂದ ಈ ಎರಡು ಯೋಜನೆಗಳನ್ನು ಕಾರ್ಯಗೊಳಿಸುತ್ತೇವೆ ಎಂದು ತಿಳಿಸಿದರು. ಕೌಶಲ್ಯಾಭಿವೃದ್ಧಿ ಕುರಿತು ಸಮಾಲೋಚನೆ ನಡೆಸಲಾಗಿದ್ದು, ಉದ್ಯೋಗ ಸೃಷ್ಟಿಸುವ ಕಡೆ ಆದ್ಯತೆ ನೀಡಬೇಕು. 

ಅಲ್ಲದೇ, ಬೆಂಗಳೂರು ನಂತರದ ಎರಡನೇ ಹಂತದ ನಗರಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು ಸೇರಿದಂತೆ ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು. ರಾಜ್ಯ ಕೃಷಿ ಮಾರುಕಟ್ಟೆ ನಿಯಮದಲ್ಲಿ 2013 ರಿಂದ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಇ-ನ್ಯಾಮ್ ಅಧ್ಯಯನ ನಡೆಸಿದೆ. 

ಏಕೀಕೃತ ಮಾರುಕಟ್ಟೆ ವೇದಿಕೆ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆಯನ್ನು ಆವಿಷ್ಕಾರ ವಿಧಾನದ ಮೂಲಕ ನಿರ್ಧರಿಸುತ್ತಿದೆ. ಮಣ್ಣಿನ ಪರೀಕ್ಷೆಯಲ್ಲಿ ಜಿಐಎಸ್-ಜಿಪಿಎಸ್ ಮತ್ತು ಮಣ್ಣು ಮಾದರಿ ಸಂಗ್ರಹದಂತಹ ಆ್ಯಂಡ್ರಾಯ್ಡ್ ಆಪ್ ಅಳವಡಿಸಿಕೊಂಡಿದೆ. ರಾಜ್ಯ ದತ್ತಾಂಶ ಕೇಂದ್ರವನ್ನು ದೆಹಲಿಯ ಮಣ್ಣಿನ ಸಂರಕ್ಷಣಾ ಕಾರ್ಡ್ ಪೋರ್ಟಲ್ ಜತೆ ಸಂಯೋಜಿಸಲಾಗಿದೆ. ಇದು ಅಧಿಕ ಮಟ್ಟದಲ್ಲಿ ರೈತರಿಗೆ ಉಪಯೋಗವಾಗುತ್ತಿದೆ ಎಂದು ನುಡಿದರು. 

ಪ್ರತಿವರ್ಷ ವಿಪತ್ತು ಮರುಕಳಿಸುತ್ತಿರುವ ಕಾರಣ ರಾಜ್ಯಕ್ಕೆ ದೊಡ್ಡ ಹೊರೆಯಾಗಿದೆ. ಐದು ವರ್ಷದ ಅವಧಿಗೆ ಕೇಂದ್ರದಿಂದ ವಿಪತ್ತು ಪರಿಹಾರದ ಹಣ ಕೇವಲ 1375  ಕೊಟಿ ರು. ನೀಡಲಾಗುತ್ತಿದೆ. ಇದು ಉಳಿದ ರಾಜ್ಯಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಅಲ್ಲದೇ,  ನಗರ ಅಭಿವೃದ್ಧಿ ತಂತ್ರಜ್ಞಾನವನ್ನು ನೀತಿ ಆಯೋಗದಲ್ಲಿ ಅಳವಡಿಸಿಕೊಳ್ಳಬೇಕು. ನೀತಿ ಆಯೋಗ ಕೇಂದ್ರ ಸರ್ಕಾರದಲ್ಲಿ ಒಕ್ಕೂಟಗಳ ಪಾಲ್ಗೊಳ್ಳುವಿಕೆ, ಮಧ್ಯಮ ಅವಧಿಯ ಯೋಜನೆಯ ಗುರಿ ಮತ್ತು ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತದೆ  ಎಂದು ನಂಬಿದ್ದೇನೆ ಎಂದರು.  

ಕೃಷಿ ಚಟುವಟಿಕೆಗೆ ನೀರು ಅಗತ್ಯವಾಗಿದ್ದು, ನೀರು ಸಂರಕ್ಷಣೆಗಾಗಿ ಕೆರೆ ಸಂಜೀವಿನಿಯಂತಹ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಹಿಂದುಳಿದ ಯಾದಗಿರಿ, ರಾಯಚೂರು ಜಿಲ್ಲೆಗಳ ಅಭಿವೃದ್ಧಿಗೆ ನಾವು ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕಾಗಿ  ಕೇಂದ್ರ ಸರ್ಕಾರ ವರ್ಷಕ್ಕೆ 100 ಕೋಟಿ ರು.ನಂತೆ ಐದು ವರ್ಷ ಹಣ ನೀಡಬೇಕು ಎಂದರು.

loader