ಬಳ್ಳಾರಿ: ರಮೇಶ್‌ ಜಾರಕಿಹೊಳಿ ಒಬ್ಬಂಟಿಯಲ್ಲ. ಅವರ ಹಿಂದೆ ಶಾಸಕರಿದ್ದಾರೆ. ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುನ್ನವೇ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಡುವೆ ಮುನಿಸು ಶುರುವಾಗಿದೆ. ಈಗಾಗಲೇ ಒಬ್ಬೊರ ಮೇಲೊಬ್ಬರು ಹರಿಹಾಯುತ್ತಿದ್ದಾರೆ. ಎರಡೂ ಪಕ್ಷಗಳ ಆಂತರಿಕ ಕಚ್ಚಾಟದಿಂದ ಮೈತ್ರಿ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದರು. ರಾಜ್ಯದ ರಾಜಕೀಯ ಬೆಳವಣಿಗೆ ನೋಡಿದರೆ ರಮೇಶ್‌ ಜಾರಕಿಹೊಳಿ ಅವರು ಹೇಳಿದಂತೆ ಹಾಲಿಗಳು ಮಾಜಿಯಾಗಬಹುದು. ಮಾಜಿಗಳು ಹಾಲಿಯಾಗಬಹುದು ಎಂದೆನಿಸುತ್ತದೆ ಎಂದಿದ್ದಾರೆ.

ರಾಜ್ಯಾಧ್ಯಕ್ಷ ಹುದ್ದೆ ಆಕಾಂಕ್ಷಿಯಲ್ಲ:  ನಾನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ನಮ್ಮ ಪಕ್ಷದಲ್ಲಿ ವೈಯಕ್ತಿಕ ತೀರ್ಮಾನ ಕೈಗೊಳ್ಳುವಂತಿಲ್ಲ. ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.