ರಸ್ತೆ ಅಪಘಾತದಲ್ಲಿ ದೇಶದಲ್ಲಿ 3 ನೇ ಸ್ಥಾನದಲ್ಲಿದೆ ಕರ್ನಾಟಕ

Karnataka 3 rd place in Road Accident
Highlights

ರಾಜ್ಯದಲ್ಲಿ 2017 ನೇ ಸಾಲಿನಲ್ಲಿ ಶೇ.9.7 ರಷ್ಟು ಅಪಘಾತ ಪ್ರಕರಣ ಇಳಿಕೆಯಾಗಿದ್ದರೂ, ಅಪಘಾತಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ ತೃತೀಯ ಸ್ಥಾನ ಹಾಗೂ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ ತಿಳಿಸಿದರು.

ಬೆಂಗಳೂರು (ಜ.10): ರಾಜ್ಯದಲ್ಲಿ 2017 ನೇ ಸಾಲಿನಲ್ಲಿ ಶೇ.9.7 ರಷ್ಟು ಅಪಘಾತ ಪ್ರಕರಣ ಇಳಿಕೆಯಾಗಿದ್ದರೂ, ಅಪಘಾತಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ ತೃತೀಯ ಸ್ಥಾನ ಹಾಗೂ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ ತಿಳಿಸಿದರು.

ರಾಜ್ಯ ಸಾರಿಗೆ ಇಲಾಖೆಯ ರಸ್ತೆ ಸುರಕ್ಷತಾ  ಕೋಶವೂ ಅಪಘಾತ ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸುಪ್ರೀಂಕೋರ್ಟ್ ರಸ್ತೆ ಸುರಕ್ಷತಾ ಸಮಿತಿ ರಚಿಸಿದ್ದು,

ಈ ಸಮಿತಿಯು ಎಲ್ಲ ರಾಜ್ಯಗಳ ಸುರಕ್ಷತಾ ಕ್ರಮಗಳ ಮೇಲೆ ನಿಗಾವಹಿಸಿ ಮೂರು ತಿಂಗಳಿಗೆ ಒಮ್ಮೆ ಪ್ರಗತಿ ಪರಿಶೀಲನೆ ನಡೆಸುತ್ತಿದೆ. ಅಂತೆಯೆ ರಸ್ತೆ ಸುರಕ್ಷತಾ ಸಮಿತಿಯು ೨೦೧೭ನೇ ಸಾಲಿನಲ್ಲಿ ಶೇ.10 ರಷ್ಟು ಅಪಘಾತ ನಿಯಂತ್ರಿಸುವಂತೆ ರಾಜ್ಯಗಳಿಗೆ ಸೂಚಿಸಿತ್ತು. ಅದರಂತೆ ಕರ್ನಾಟಕದಲ್ಲಿ ಅಪಘಾತಗಳ ಸಂಖ್ಯೆ ಹಾಗೂ ಅಪಘಾತಗಳಲ್ಲಿ ಮೃತಪಟ್ಟವರ  ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಸಮಿತಿಯು ಪ್ರಗತಿ ಪರಿಶೀಲನೆ ಮಾಡಿದ್ದು, ರಸ್ತೆ ಸುರಕ್ಷತಾ ಕೋಶದ ಕಾರ್ಯವನ್ನು ಶ್ಲಾಘಿಸಿದೆ ಎಂದು ಹೇಳಿದರು.

ಅಪಘಾತ ನಿಯಂತ್ರಣದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 5 ಲಕ್ಷ ಅಪಘಾತ  ಸಂಭವಿಸುತ್ತಿದ್ದು, 1.40 ಲಕ್ಷ ಮಂದಿ ಸವಾರರು  ಮೃತಪಡುತ್ತಿದ್ದಾರೆ.

ಕರ್ನಾಟಕದಲ್ಲಿ ಪ್ರತಿ ವರ್ಷ  ಸುಮಾರು 10 ಸಾವಿರ ಅಪಘಾತ ಸಂಭವಿಸುತ್ತಿದ್ದು, 50 ಸಾವಿರ ಸವಾರರು ಮೃತಪಡುತ್ತಿದ್ದಾರೆ. ಈ ಮೂಲಕ ಕರ್ನಾಟಕ ದೇಶದಲ್ಲಿ ಹೆಚ್ಚು ಅಪಘಾತಗಳ ಸಂಖ್ಯೆಯಲ್ಲಿ ತೃತೀಯ ಸ್ಥಾನ ಹಾಗೂ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ರಸ್ತೆ ಸುರಕ್ಷತಾ ಕೋಶದ ಜೊತೆಗೆ ಪೊಲೀಸ್ ಇಲಾಖೆ, ಶಿಕ್ಷಣ, ಆರೋಗ್ಯ ಹಾಗೂ ಲೋಕೋಪಯೋಗಿ ಇಲಾಖೆಗಳು ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳಿಂದ ರಾಜ್ಯದಲ್ಲಿ ಅಪಘಾತ ಪ್ರಕರಣಗಳು ಇಳಿಕೆಯಾಗಿವೆ ಎಂದರು.

ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ ಅಸ್ತಿತ್ವಕ್ಕೆ: ರಸ್ತೆ ಸುರಕ್ಷತಾ ಕೋಶವನ್ನು ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಈ ಸಂಬಂಧದ ವಿಧೇಯಕಕ್ಕೆ ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳು ಒಪ್ಪಿಗೆ ಸೂಚಿಸಿದ್ದು, ರಾಜ್ಯಪಾಲರ ಅನುಮೋದನೆ ಸಿಕ್ಕಿದೆ. ಶೀಘ್ರದಲ್ಲೇ  ಅಧಿಸೂಚನೆ ಹೊರಡಿಸಲಾಗುವುದು. ಪ್ರಾಧಿಕಾರ ಅಸ್ತಿತ್ವಕ್ಕೆ ಬರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗಲಿದೆ. ಜೊತೆಗೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

 

loader