ಬೆಳಗಾವಿ[ಫೆ.07]: ಬೆಳಗಾವಿಯ ಉದ್ಯಮಿಯೊಬ್ಬರನ್ನು ವರಿಸಿರುವ ರಷ್ಯಾ ಮೂಲದ ರೂಪದರ್ಶಿಯೊಬ್ಬಳು ಜೈಪುರದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ‘ವೊಗ್ಗಿಶ್‌ ಮಿಸಸ್‌ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 25 ವರ್ಷದ ಕರೀನಾ ರಾಜು ಚಂದ್ರಶೇಖರಪ್ಪ ಅಂತಿಮ ಸುತ್ತಿನ ಕೊನೆಯ ಪ್ರಶ್ನೆಗೆ ಪರಿಣಾಮಕಾರಿಯಾದ ಉತ್ತರ ನೀಡುವ ಮೂಲಕ ಪ್ರಶಸ್ತಿ ಗೆದ್ದಿದ್ದಾರೆ.

ಮೂಲತಃ ರಷ್ಯಾದವರಾದ ಕರೀನಾ ವೊರೊಬಿವಾ 2013ರಲ್ಲಿ ಭಾರತಕ್ಕೆ ಬಂದಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮಿ ರಾಜು ಚಂದ್ರಶೇಖರಪ್ಪ ಅವರನ್ನು ಪ್ರೀತಿಸಿ 2014ರಲ್ಲಿ ವಿವಾಹ ಆಗಿದ್ದರು. ನಾಲ್ಕು ವರ್ಷದ ಮಗಳೊಂದಿಗೆ ಈ ದಂಪತಿ ಬೆಳಗಾವಿಯಲ್ಲಿ ವಾಸವಾಗಿದ್ದಾರೆ. ಮಾಡೆಲಿಂಗ್‌ನಲ್ಲಿ ತೊಡಿಗಿಸಿಕೊಂಡಿದ್ದ ಕರೀನಾ, ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 10 ತಿಂಗಳ ಹಿಂದೆ ಬಿಯಾಸ್‌ ನದಿಯಲ್ಲಿ ಬಿದ್ದು ಗಾಯಗೊಂಡಿದ್ದ ಅವರು, ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಮಿಸಸ್‌ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ಜೂನ್‌ನಲ್ಲಿ ನಡೆಯಲಿರುವ ಮಿಸಸ್‌ ಇಂಟರ್‌ನ್ಯಾಷನಲ್‌ ಸ್ಪರ್ಧೆಗೆ ಕರೀನಾ ಆಯ್ಕೆ ಆಗಿದ್ದಾರೆ.