Asianet Suvarna News Asianet Suvarna News

ಕಾರ್ಗಿಲ್ ಯುದ್ಧದ ಅನುಭವಗಳನ್ನು ಮಾಜಿ ಸೈನಿಕನ ಮಾತುಗಳಲ್ಲಿ ಕೇಳಿದಾಗ...

ಅದು ಕಾರ್ಗಿಲ್ ಯುದ್ಧದ ತೀವ್ರ ಸೆಣಸಾಟದ ಸಮಯ. ಬೆಳಗಾಗುತ್ತಿದ್ದಂತೆಯೇ ಶೆಲ್‌ಗಳ ದಾಳಿ, ಮದ್ದು-ಗುಂಡುಗಳ ಸದ್ದೇ ನಿತ್ಯದ ಸುಪ್ರಭಾತ ನಮಗೆ. ನಾವು ಇದ್ದುದು ಸುಮಾರು 1400 ಅಡಿ ಎತ್ತರದ ಚೌಕಿಬಾಲ್ ಪ್ರದೇಶದಲ್ಲಿ. ಇದು ಜಮ್ಮು-ಕಾಶ್ಮೀರ ರಾಜ್ಯದ ಕುಪ್ವಾರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ.

Kargil War Experience with Kannada Prabha

ಬೆಂಗಳೂರು (ಡಿ.28): ಅದು ಕಾರ್ಗಿಲ್ ಯುದ್ಧದ ತೀವ್ರ ಸೆಣಸಾಟದ ಸಮಯ. ಬೆಳಗಾಗುತ್ತಿದ್ದಂತೆಯೇ ಶೆಲ್‌ಗಳ ದಾಳಿ, ಮದ್ದು-ಗುಂಡುಗಳ ಸದ್ದೇ ನಿತ್ಯದ ಸುಪ್ರಭಾತ ನಮಗೆ. ನಾವು ಇದ್ದುದು ಸುಮಾರು 1400 ಅಡಿ ಎತ್ತರದ ಚೌಕಿಬಾಲ್ ಪ್ರದೇಶದಲ್ಲಿ. ಇದು ಜಮ್ಮು-ಕಾಶ್ಮೀರ ರಾಜ್ಯದ ಕುಪ್ವಾರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಸಂಪೂರ್ಣ ಮಂಜು ಗಟ್ಟುವ ಸ್ಥಳವದು. ಅಲ್ಲಿದ್ದುಕೊಂಡೇ ನಾವು ಶತ್ರುಗಳ ದಾಳಿಯನ್ನು ಎದುರಿಸಬೇಕಾಗಿತ್ತು. ಅದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ, ಶತ್ರು ರಾಷ್ಟ್ರವನ್ನು ಮಣಿಸಬೇಕು. ಯುದ್ಧದಲ್ಲಿ ಜಯಶೀಲ ರಾಗಿ ನಮ್ಮ ರಾಷ್ಟ್ರಧ್ವಜ ಮೇಲೆತ್ತಿ ಸಂಭ್ರಮಿಸಬೇಕು ಎಂಬ ಉತ್ಕಟ ಆಸೆ ಎಲ್ಲ ಸವಾಲುಗಳನ್ನು ಎದುರಿಸುವ ಶಕ್ತಿ ನೀಡಿತ್ತು. ಶತ್ರುಗಳಿಗೆ ಹಗಲು-ರಾತ್ರಿ ಎಂಬುದಿಲ್ಲ. ಎಲ್ಲ ಕಾಲದಲ್ಲೂ ದಾಳಿಯ ಭೀತಿ ಇದ್ದೇ ಇತ್ತು. ರಾತ್ರಿ ಹೊತ್ತಲ್ಲಿ ನಾವಿದ್ದ ತಾಣಗಳ ಪತ್ತೆ ಅವರಿಗೆ ಕಷ್ಟವಾಗುತ್ತಿತ್ತು. ಬೆಳಗು ಹರಿಯುವುದನ್ನೇ ಕಾಯುತ್ತಿದ್ದ ಶತ್ರುಪಡೆ, ನಿರಂತರ ದಾಳಿಗೈಯುತ್ತಿತ್ತು. ಆದರೆ, ಅದ್ಯಾವುದನ್ನೂ ಲೆಕ್ಕಿಸದ ನಾವು ಪ್ರತಿದಾಳಿ ನಡೆಸುತ್ತಿದ್ದೆವು. ಆದರೆ, ಎಲ್ಲೋ ಒಂದು ಕಡೆ ಸಣ್ಣದೊಂದು ಆತಂಕ ಇದ್ದೇ ಇತ್ತು. ಶತ್ರುಗಳು ನಮ್ಮ ಮೇಲೆ ದಾಳಿ ನಡೆಸಲು ಅನುಸರಿಸುವ ತಂತ್ರಗಳ ಬಗ್ಗೆ ನಮಗೂ ಅರಿವಿತ್ತು. ಹೀಗಾಗಿ ಅನೇಕ ಬಾರಿ ಅವರ ದಾಳಿಯನ್ನು ತಪ್ಪಿಸಿಕೊಂಡು ಪ್ರತಿದಾಳಿಯಲ್ಲಿ ಯಶಸ್ವಿಯಾಗುತ್ತಿದ್ದೆವು.

 ಊಟ-ನಿದ್ರೆಗಳ ಅರಿವಿರಲಿಲ್ಲ

ನಿತ್ಯವೂ ಯುದ್ಧದ ಸನ್ನಿವೇಶಗಳನ್ನು ಎದುರುಗೊಳ್ಳಬೇಕಿತ್ತು. ದಾಳಿ- ಪ್ರತಿದಾಳಿಗಳು, ಸಾವು-ನೋವಿನ ಸುದ್ದಿಗಳು ಮಾಮೂಲಿಯಂತಾ ಗಿತ್ತು. ನಮಗಾಗ ಹಸಿವು, ಊಟ, ನಿದ್ರೆಗಳ ಅರಿವಿರಲಿಲ್ಲ. ಶತ್ರುಗಳ ಕಡೆಗೆ ಸದಾ ನಮ್ಮ ನಿಗಾ ಇರುತ್ತಿತ್ತು. ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಕಾರ್ಗಿಲ್ ಯುದ್ಧ ಮುಗಿವವರೆಗೆ ನಮ್ಮ ಅನ್ನ, ಆಹಾರಗಳ ಕಡೆ ಗಮನ ಇರುತ್ತಿರಲಿಲ್ಲ. ನಿರ್ದಿಷ್ಟ ಜಾಗದಲ್ಲಿ ತಯಾರಾಗುತ್ತಿದ್ದ ಊಟ(ಕಿಚಡಿ)ವನ್ನೇ ತಿನ್ನುತ್ತಿದ್ದೆವು. ಊಟ ತಯಾರಾಗುವ ಜಾಗಕ್ಕೆ ಹೋಗಲೂ ಸಹ ದೊಡ್ಡ ಸಾಹಸ ಮಾಡಬೇಕಿತ್ತು. ಏಕೆಂದರೆ ಶತ್ರುಗಳು ಯಾವಾಗ ಹೇಗೆ ದಾಳಿ ಮಾಡುತ್ತಾರೋ ಗೊತ್ತಾಗುತ್ತಿರಲಿಲ್ಲ. ಅಪಾಯದ ಅರಿವಿದ್ದರೂ ಊಟದ ಜಾಗ ಹುಡುಕಿಕೊಂಡು ಹೋಗಲೇಬೇಕಿತ್ತು. ಇಬ್ಬಿಬ್ಬರು ಜೊತೆಗೂಡಿಕೊಂಡು ನಿಗದಿತ ಸ್ಥಳಕ್ಕೆ ತೆರಳಿ ಊಟ ತರುತ್ತಿದ್ದೆವು.

ನೀರಿಗಾಗಿ ಪಟ್ಟ ಪಡಿಪಾಟಲು ಕಾರ್ಗಿಲ್ ಯುದ್ಧ ಶುರುವಾದ ಹೊತ್ತಿನಲ್ಲಿ ಒಂದು ಘಟನೆ ನಡೆಯಿತು. ಯೋಧರು ಕುಡಿವ ನೀರಿಗಾಗಿ ತೀವ್ರ ಆಳದ ಜಾಗಕ್ಕೆ ಇಳಿದು ಚಿಲುಮೆಯಿಂದ ನೀರು ತರಬೇಕಿತ್ತು. ಈ ಮೊದಲೆಲ್ಲಾ ನೀರು ಹೊತ್ತು ತರಲು ಕತ್ತೆಯನ್ನು ಹೋಲುವ ಪ್ರಾಣಿಯನ್ನು ಬಳಕೆ ಮಾಡುತ್ತಿದ್ದರು. ನಮ್ಮ ದುರದೃಷ್ಟಕ್ಕೆ ಕಾರ್ಗಿಲ್ ಯುದ್ಧದ ದಾಳಿಯಲ್ಲಿ ನೀರು ಹೊರುವ ಆ ಪ್ರಾಣಿ ಸತ್ತು ಹೋಯಿತು. ಹೀಗಾಗಿ ತೀವ್ರ ಆಳಕ್ಕೆ ಇಳಿದು ಚಿಲುಮೆಯಲ್ಲಿ ಬರುವ ನೀರನ್ನು ಡ್ರಮ್‌ಗೆ ತುಂಬಿಕೊಂಡು ಮೇಲೆ ಹೊತ್ತು ತರಬೇಕಿತ್ತು. ಒಂದೆಡೆ ಭಾರವಾದ ಡ್ರೆಸ್ ಹಾಗೂ ಶಸ್ತ್ರಾಸ್ತ್ರಗಳು, ಜೊತೆಯಲ್ಲಿ ನೀರು ಹೊತ್ತು ತರುವುದು ದೊಡ್ಡ ಕಷ್ಟದ ಕೆಲಸವಾಗಿತ್ತು. ಕುಡಿವ ನೀರು ಬೇರೆಲ್ಲೂ ಸಿಗುತ್ತಿರಲಿಲ್ಲ. ಹೀಗಾಗಿ ಚಿಲುಮೆ ನೀರನ್ನೆ ಆಶ್ರಯಿಸಿದ್ದೆವು. ಇಲ್ಲಿ ಮತ್ತೊಂದು ಆತಂಕದ ಸಂಗತಿ ಎಂದರೆ ನೀರು ಹೊತ್ತು ತರುವಾಗ ಸಾಕಷ್ಟು ಜಾಗ್ರತೆ ವಹಿಸಬೇಕಾಗಿತ್ತು. ಹೀಗಾಗಿ ಅನುಭವ ಇರುವವರೇ ಹೆಚ್ಚಾಗಿ ನೀರು ತರಲು ಹೊರಡುತ್ತಿದ್ದೆವು. ಕುಡಿವ ನೀರಿಗೂ ತತ್ವಾರದಿಂದಾಗಿ ತಿಂಗಳುಗಟ್ಟಲೆ ಸ್ನಾನ ಮಾಡುತ್ತಿರಲಿಲ್ಲ.

ದೇಶ ರಕ್ಷಣೆಯ ಕನಸು ಬಾಲ್ಯದಲ್ಲಿತ್ತು ನಾನು ಆಸೆಪಟ್ಟು ಆರ್ಮಿ ಸೇರಿದ್ದು. ಇದಕ್ಕೆ ಕಾರಣವೂ ಇದೆ. ನನಗೆ ಮಿಲ್ಟ್ರಿಯ ಸೈನಿಕರು ಬಳಸುವ ಶಸ್ತ್ರಾಸ್ತ್ರಗಳ (ವೆಪನ್ಸ್) ಮೇಲೆ ಬಹಳ ಮೋಹವಿತ್ತು. ಜೊತೆಗೆ ಮಿಲ್ಟ್ರಿ ಸೇರಿ ದೇಶ ರಕ್ಷಣೆ ಮಾಡಬೇಕು ಎಂಬ ಕನಸು ಚಿಗುರಿತ್ತು. ಯುದ್ಧದಲ್ಲಿ ಗನ್ ಹಿಡಿದು ಶತ್ರುಗಳನ್ನು ಹೊಡೆ ದುರುಳಿಸಬೇಕು ಎಂಬ ಆಸೆಯೇ ನಾನು ಸೇನೆಗೆ ಸೇರಲು ಮುಖ್ಯ ಕಾರಣ. ನಾನು ಸೇನೆ ಸೇರುವುದು ತಂದೆ-ತಾಯಿಗಳಿಗೆ ಇಷ್ಟವಿರಲಿಲ್ಲ. ಅವರಿಗೆ ತಿಳಿಸದೆ ಸೇನಾ ಭರ್ತಿ ರ‌್ಯಾಲಿಯಲ್ಲಿ ಭಾಗವಹಿಸಿದೆ. ಬಳಿಕ ಗೆಳೆಯನ ಮದುವೆ ನೆಪ ಹೇಳಿ ಬೆಂಗಳೂರಿಗೆ ತೆರಳಿ ಪರೀಕ್ಷೆ ಬರೆದು ಬಂದೆ. ಪರೀಕ್ಷೆ ಪಾಸಾಗಿ, ಸೆಲೆಕ್ಷನ್ ಆದೆ. ಪೋಸ್ಟ್‌ಮ್ಯಾನ್ ಮನೆಗೆ ಬಂದು ‘ನಿಮ್ ಮಗ ಮಿಲ್ಟ್ರಿಗೆ ಸೆಲೆಕ್ಷನ್ ಆಗ್ಯಾನ’ ಎಂದಾಗಲೇ ಮನೆಯವರಿಗೆ ಗೊತ್ತಾಗಿದ್ದು. ಬೇಡ ಎಂದು ಒತ್ತಾಯಿಸಿದರು. ಸೇನೆಗೆ ಸೇರಲೇಬೇಕು ಎಂದು ಪಟ್ಟು ಹಿಡಿದು, ತೆರಳಿದೆ. ಆರ್ಮಿಯಲ್ಲಿ ೨೦ ವರ್ಷ ೫ ತಿಂಗಳು ಸೇವೆ ಮಾಡಿದ್ದೇನೆ. ಜಮ್ಮು- ಕಾಶ್ಮೀರ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಅಸ್ಸಾಂ, ಅರುಣಾಚಲ ಪ್ರದೇಶದ ಕಣವೆಗಳಲ್ಲಿ ಕೆಲಸ ಮಾಡಿದ್ದೇನೆ. ಜಮ್ಮು- ಕಾಶ್ಮೀರದಲ್ಲಿ ಹೆಚ್ಚಾಗಿ ಸೇವೆಯಲ್ಲಿದ್ದೆ. ಅಸ್ಸಾಂನಲ್ಲಿರುವಾಗ ಉಲ್ಫಾ ಉಗ್ರರನ್ನು ಗುಂಡಿಕ್ಕಿ ಕೊಂದೆ. ಆತನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಸಿಕ್ಕವು. ನನ್ನ ಕಾರ್ಯ ಮೆಚ್ಚಿ ಮೇಲಧಿಕಾರಿಗಳು ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿದರು. ಇಂದಿಗೂ ಆ ದಿನಗಳ ಅನುಭವಗಳು ರೋಮಾಂಚನ ನೀಡುತ್ತವೆ. ಅಲ್ಲಿ ಕಳೆದ ಪ್ರತಿ ಗಳಿಗೆಗಳು ನೆನಪಿನಲ್ಲುಳಿದಿವೆ. ಗೆಳೆಯರ ಜೊತೆ ಒಡನಾಟ, ದೇಶ ಕ್ಕಾಗಿ ಶತ್ರುಗಳ ಜೊತೆ ಕಾದಾಟ ಎಲ್ಲವೂ ಅವಿಸ್ಮರಣೀಯ ಕ್ಷಣಗಳು. ನನ್ನ ಯೌವನಾವಸ್ಥೆಯ ಬಹುಪಾಲು ದಿನಗಳನ್ನು ದೇಶ ರಕ್ಷಣೆಯಲ್ಲಿಯೇ ಕಳೆದಿರುವೆ. ಈ ಬಗ್ಗೆ ನನಗೆ ಹೆಮ್ಮೆ ಇದೆ. ಎರಡು ದಶಕಗಳ ಕಾಲ ನಾನು ಕುಟುಂಬ, ಪೋಷಕರಿಂದ ದೂರ ಉಳಿದಿದ್ದೆ. ಆದರೆ, ದೇಶ ಕಾಯುವ ಕೆಲಸಕ್ಕಿಂತ ದೊಡ್ಡ ಕೆಲಸ ಮತ್ಯಾವುದೂ ಇಲ್ಲ ಎಂದು ನಂಬಿದವನು ನಾನು. ಹೀಗಾಗಿ ರಾಷ್ಟ್ರ ರಕ್ಷಣೆ ಕಾರ್ಯಕ್ಕೆ ನನಗೊಂದು ಅವಕಾಶ ಸಿಕ್ಕಿದ್ದೇ ಪುಣ್ಯ ಎಂದು ಭಾವಿಸಿದ್ದೇನೆ. ದೇಶಕ್ಕಾಗಿ ಜೀವ ಮುಡಿಪಾಗಿಟ್ಟ ಹೆಮ್ಮೆಯಿದೆ. ಕಾರ್ಗಿಲ್ ಯುದ್ಧದ ದಿನಗಳಂತೂ ಸದಾ ನೆನಪಿನಲ್ಲುಳಿದ ಕ್ಷಣಗಳಾಗಿವೆ.

ಬಾಲ್ಯ ಬಳ್ಳಾರಿಯಲ್ಲಿ ನನ್ನ ಪ್ರಾಥಮಿಕ ಶಿಕ್ಷಣ ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಫೋರ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ. ಬಳಿಕ ಪ್ರೌಢಶಿಕ್ಷಣ ಸಂತ ಜಾನ್ ಶಾಲೆಯಲ್ಲಿ ಮುಂದುವರಿಯಿತು. ಎಸ್‌ಎಸ್‌ಎಲ್‌ಸಿ ಪಾಸಾಗಿ ಪಿಯುಸಿ ಸೇರಿಕೊಂಡೆ. ಆಗ ಪೇಪರ್‌ನಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಪಟ್ಟಣದ ಐಬಿಯಲ್ಲಿ ಆರ್ಮಿ ಆಯ್ಕೆಗೆ ಓಪನ್ ರ‌್ಯಾಲಿ ನಡೆಯುತ್ತಿದೆ ಎಂದು ಬರೆದಿತ್ತು. ನಾನು, ನನ್ನ ಗೆಳೆಯ ಇಬ್ಬರೂ ಸೇರಿ ರ‌್ಯಾಲಿಯಲ್ಲಿ ಭಾಗವಹಿಸಿದೆವು. ೧೯೯೪ರ ಡಿಸೆಂಬರ್‌ನಲ್ಲಿ ನಾನು ಆಯ್ಕೆಯಾದೆ. ಬಳಿಕ 20 ವರ್ಷ, 5 ತಿಂಗಳು ಸೇನೆಯಲ್ಲಿ ಸೇವೆ ಮಾಡಿದೆ. ಆರ್ಮಿ ಸೇರಿದ 7 ನೇ ವರ್ಷದಲ್ಲಿಯೇ ಮದುವೆಯಾದೆ. ಪತ್ನಿ ಸಂಗೀತಾ ನಾರಾಯಣ್, ಪುತ್ರ ಕೌಸ್ತುಭ್ ನಾರಾಯಣ್ ಹಾಗೂ ಪುತ್ರಿ ಮೇಘನಾ ನಾರಾಯಣ್ ನನ್ನ ಪುಟ್ಟ ಕುಟುಂಬ. ಇದೀಗ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಎಸ್‌ಬಿಐನ ಆಮ್ ಗಾರ್ರ್ಡ್ ಆಗಿ ಸೇವೆಯಲ್ಲಿದ್ದೇನೆ. ಸೇನೆ ಸೇವೆಗೆ ಕರೆ ಬಂದರೆ ತೆರಳಲು ಈಗಲೂ ಸಿದ್ಧನಿದ್ದೇನೆ. ?

ನಿರೂಪಣೆ: ಕೆ.ಎಂ.ಮಂಜುನಾಥ್ ಬಳ್ಳಾರಿ

Follow Us:
Download App:
  • android
  • ios