ಬೆಳಗಾವಿ[ಮಾ.17]: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸರ್ಕಾರಿ ನೌಕರಿ ಪಡೆಯಲು ವಿದ್ಯಾರ್ಥಿಗಳು ಹಗಲು ರಾತ್ರಿಯನ್ನದೇ ಕಷ್ಟಪಟ್ಟು ಓದಿದರೂ ನೌಕರಿ ಸಿಗದೇ ನಿರಾಶರಾಗುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಆರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಹುಬ್ಬೇರುವಂತೆ ಮಾಡಿದ್ದಾನೆ.

ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದವರಾದ ಕರೇಪ್ಪ ಭೀಮಪ್ಪ ಕುರುವಿನಕೊಪ್ಪ ಈ ಸಾಧನೆ ಮಾಡಿದವರು. ಈತ ಸದ್ಯ ಬೆಳಗಾವಿ ಶಹಾಪುರ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಈತ 2013ರಲ್ಲಿ ಕೆಎಸ್‌ಐಎಸ್‌ಎಫ್‌ ಹಾಗೂ ಕೆಎಸ್‌ಆರ್‌ಪಿನಲ್ಲಿ ಆಯ್ಕೆಯಾಗಿದ್ದ. ಇದರಲ್ಲಿ ಕೆಎಸ್‌ಆರ್‌ಪಿ ನೌಕರಿ ಸೇರಿಕೊಂಡ. ಬೆಂಗಳೂರಿನಲ್ಲಿ ಎರಡು ವರ್ಷ ಕೆಲಸ ಮಾಡಿದ, ನಂತರ 2014ರಲ್ಲಿ ರೈಲ್ವೆ ಗ್ರೂಫ್‌ ಡಿ, 2015 ಎಸ್‌ಡಿಎ, 2016ರಲ್ಲಿ ಸಿವಿಲ್‌ ಪೊಲೀಸ್‌ ಪೇದೆಯಾಗಿ ನೇಮಕಗೊಂಡು ಬೆಳಗಾವಿಯಲ್ಲಿ ಎರಡು ವರ್ಷಗಳಿಂದ ನೌಕರಿ ಮಾಡುತ್ತಿದ್ದಾನೆ. 2017ರಲ್ಲಿ ಬರೆದ ಎಸ್‌ಡಿಎ ಫಲಿತಾಂಶ ಮಾ.15 ರಂದು ಹೊರ ಬಂದಿದ್ದು ಇದಲ್ಲಿ ರಾಜ್ಯಕ್ಕೆ 291ನೇ ರಾರ‍ಯಂಕ್‌ ಪಡೆದು ಸಾಧನೆ ಮಾಡಿದ್ದಾನೆ.

ಚಿಕ್ಕನಿಂದಿಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜನ ಆಶ್ರಯಲ್ಲಿ ಬೆಳೆದ ಯುವಕ ಈತ. ಕುರಿ ಕಾಯುತ್ತಾ, ಮದುವೆಗಳಲ್ಲಿ ಪೆಂಡಲ್‌ ಹಾಕುತ್ತಾ ಅಲ್ಪಸ್ವಲ್ಪ ಸಂಪಾದನೆ ಮಾಡುತ್ತಾ ಕಾಲೇಜವರೆಗೂ ಕಲಿತ. ಇದೇ ಸಮಯದಲ್ಲಿ ಸರ್ಕಾರಿ ನೌಕ್ರಿ ಮಾಡಬೇಕು ಎಂದು ಛಲತೊಟ್ಟು, ಗುಡಿಸಲ್ಲಿ ಚಿಮಣಿ ಕೆಳಗೆ ಹಗಲು-ರಾತ್ರಿ ಓದಿದ್ದಾನೆ.