ಬೆಂಗಳೂರು[ಮೇ.31]: ಕೇಂದ್ರದ ನೂತನ ಸಚಿವರಾದ ಡಿ .ವಿ. ಸದಾನಂದಗೌಡ, ಪ್ರಹ್ಲಾದ್‌ ಜೋಷಿ ಹಾಗೂ ಸುರೇಶ್‌ ಅಂಗಡಿ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದರೆ ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ತೋರಿದ್ದು, ತನ್ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಆಶೀರ್ವಾದದಿಂದ ಸಂಸದರಾಗಿ ಆಯ್ಕೆಯಾಗಿರುವ ಈ ಮೂವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ, ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ವಿ. ಸದಾನಂದಗೌಡ ಹಾಗೂ ಪ್ರಹ್ಲಾದ್‌ ಜೋಷಿ ಅವರು ಆಂಗ್ಲ ಭಾಷೆಯಲ್ಲಿ ಮತ್ತು ಬೆಳಗಾವಿಯಂತಹ ಅಪ್ಪಟ ಕನ್ನಡಿಗರ ನಾಡಿನಿಂದ ಸಂಸದರಾಗಿ ಆಯ್ಕೆಯಾದ ಸುರೇಶ್‌ ಅಂಗಡಿ ಅವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಅಲ್ಲದೆ, ಇನ್ನು ಮುಂದೆ ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸಚಿವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಬೇಕು. ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅವಮಾನ ಮಾಡಿದರೆ ಅಂತಹ ಸಂಸದರ ವಿರುದ್ಧ ಕರವೇ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

‘ಕನ್ನಡಪ್ರಭ’ ಜತೆ ಮಾತನಾಡಿದ ಅವರು, ನಾಡಿನ ಮೇರು ರಾಜಕಾರಣಿಗಳಾದ ಜೆ.ಎಚ್‌. ಪಟೇಲ್‌ ಹಾಗೂ ಕೆಂಗಲ್‌ ಹನುಮಂತಯ್ಯ ಅವರು ಲೋಕಸಭೆಯಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಮಾತೃಭಾಷೆಯ ಘನತೆ ಎತ್ತಿ ಹಿಡಿದಿದ್ದರು. ಬಳಿಕ ಯಾರೂ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿರಲಿಲ್ಲ. ಈ ಬಗ್ಗೆ ಕರವೇ ಸತತ ಹೋರಾಟ ನಡೆಸಿ ನಾಯಕರಿಗೆ ಮನವಿ ಮಾಡಿದ ಫಲವಾಗಿ ದಿವಂಗತ ಅನಂತಕುಮಾರ್‌ ಅವರು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ, ಸಚಿವರಾಗಿ ಕನ್ನಡದಲ್ಲೇ ಸಹಿ ಹಾಕುವ ಮೂಲಕ ಭಾಷೆಗೆ ಗೌರವ ಸೂಚಿಸಿದ್ದರು.

ಅನಂತಕುಮಾರ್‌ ಅವರ ನಡೆಯಿಂದ ಪ್ರೇರಣೆ ಪಡೆದು ಮೊದಲಿಗೆ ಎಲ್ಲಾ ಬಿಜೆಪಿ ಸಂಸದರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಪಕ್ಷ ಭೇದವಿಲ್ಲದೆ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಶುರು ಮಾಡಿದ್ದರು. ಆದರೆ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕಾರ ಮಾಡಿದ ಈ ಮೂವರು ಅನ್ಯ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದರು.