ವಿಧಾನಸಭೆಯಲ್ಲಿ ಸಂಪಾದಕೀಯ ವರದಿ ಪ್ರಸ್ತಾಪಿಸಿದ ಸ್ಪೀಕರ್

ವಿಧಾನಸಭೆ: ವೈದ್ಯರ ಮುಷ್ಕರದ ಹಿನ್ನೆಲೆ ಕನ್ನಡಪ್ರಭ ಗುರುವಾರ ಪ್ರಕಟಿಸಿದ ವಿಶೇಷ ಸಂಪಾದಕೀಯಕ್ಕೆ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗುರುವಾರ ವಿಧಾನಸಭೆಯ ಕಲಾಪದ ವೇಳೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು ಸಂಪಾದಕೀಯಕ್ಕೆ ಪರೋಕ್ಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾಪದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು ವೈದ್ಯರು ಮುಷ್ಕರ ನಡೆಸುತ್ತಿರುವ ಕುರಿತು ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹಿಸುವ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸ್ಪೀಕರ್ ಕೋಳಿವಾಡ ಅವರು, ಇವತ್ತು ಬೆಳಗ್ಗೆ ‘ಚಿಕಿತ್ಸೆ ನೀಡದವ ವೈದ್ಯನೂ ಅಲ್ಲ, ಮನುಷ್ಯನೂ ಅಲ್ಲ’ ಎಂಬುದನ್ನು ಓದಿದ್ದೇನೆ. ಹೀಗಾಗಿ ಸರ್ಕಾರ ಹಾಗೂ ವೈದ್ಯರು ಇಬ್ಬರಿಗೂ ಮನವಿ ಮಾಡುತ್ತಿದ್ದೇನೆ.

ವೈದ್ಯರನ್ನು ಆಹ್ವಾನಿಸಿ ಚರ್ಚೆ ಮಾಡಿ, ವಿವಾದ ಬಗೆಹರಿಸಿ. ವೈದ್ಯರೂ ಮಾನವೀಯತೆಯಿಂದ ಮುಷ್ಕರನ್ನು ವಾಪಸ್ ಪಡೆಯಲಿ. ಸಮಸ್ಯೆ ಇತ್ಯರ್ಥವಾಗಲಿ ಎಂದರು. ಇದಲ್ಲದೇ ಅನೇಕ ಸದಸ್ಯರು ವೈದ್ಯರ ಮುಷ್ಕರ ಕುರಿತಂತೆ ಸಂಪಾದಕೀಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜನರ ಭಾವನೆಗಳಿಗೆ ಸ್ಪಂದಿಸಿ ಸಂಪಾದಕೀಯ ಬರೆಯಲಾಗಿದೆ.

ವಿಶೇಷವಾಗಿ ಸಂಪಾದಕೀಯದ ಹೆಡ್ಡಿಂಗ್ ತುಂಬಾ ಮಾರ್ಮಿಕ ಹಾಗೂ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು. ವಿಧೇಯಕ ಇನ್ನೂ ಜಾರಿಯಾಗಿಲ್ಲ, ಇಂತಹ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಎಷ್ಟರ ಮಟ್ಟಿಗೆ ಸರಿ? ಕನಿಷ್ಠ ಸಂಪಾದಕೀಯ ಓದಿದ ಮೇಲಾದರೂ ಮುಷ್ಕರ ಮುಂದುವರೆಸುವ ಬಗ್ಗೆ ಮರು ಚಿಂತನೆ ಮಾಡಬಹುದು ಎಂದು ಪ್ರತಿಕ್ರಿಯಿಸಿದರು.

ಬೆಂಗಳೂರು ಪ್ರಧಾನ ಕಚೇರಿಗೆ ಫೋನ್ ಮಾಡಿದ ಅನೇಕ ಸಾರ್ವಜನಿಕರು, ಮುಷ್ಕರದಿಂದ ಸಾಮಾನ್ಯರು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಪ್ರಭಾವಿ ಸಂಪಾದಕೀಯದ ಮೂಲಕ ಮುಷ್ಕರ ಮಾಡುತ್ತಿರುವ ವೈದ್ಯರಿಗೆ ಚಾಟಿ ಏಟು ನೀಡಿದಂತಾಗಿದೆ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣಗಳಲ್ಲೂ ಇದು ವೈರಲ್ ಆಗಿದೆ.