Asianet Suvarna News Asianet Suvarna News

7 ಜಿಲ್ಲೆಗಳ ಮದರಸಗಳಲ್ಲಿ ಕನ್ನಡದಲ್ಲೇ ಪಾಠ, ಪ್ರವಚನ!

ಶತಮಾನಗಳಿಂದ ಅರೇಬಿಕ್, ಮಲಯಾಳಂನಲ್ಲೇ ಶಿಕ್ಷಣ ನೀಡುತ್ತಿದ್ದ ಮದರಸಗಳು ಕನ್ನಡದತ್ತ ಹೊರಳುತ್ತಿರುವ ಮಹತ್ವದ ವಿದ್ಯಮಾನ ಸದ್ದಿಲ್ಲದೆ ನಡೆಯುತ್ತಿದೆ. ಕನ್ನಡದಿಂದ ದೂರವೇ ಉಳಿದಿದ್ದ ಮದರಸದ ಮಕ್ಕಳೀಗ ಕನ್ನಡದಲ್ಲೇ ಪಾಠ, ಪ್ರವಚನಗಳನ್ನು ಕೇಳುತ್ತಿದ್ದಾರೆ. ಕನ್ನಡದಲ್ಲೇ ಪರೀಕ್ಷೆ ಬರೆಯುತ್ತಾರೆ, ಕನ್ನಡದಲ್ಲಿ ಸುಲಲಿತವಾಗಿ ವ್ಯವಹರಿಸಲು ತೊಡಗಿದ್ದಾರೆ.

Kannada will be used in Madarasa

ಮಂಗಳೂರು (ಆ.07): ಶತಮಾನಗಳಿಂದ ಅರೇಬಿಕ್, ಮಲಯಾಳಂನಲ್ಲೇ ಶಿಕ್ಷಣ ನೀಡುತ್ತಿದ್ದ ಮದರಸಗಳು ಕನ್ನಡದತ್ತ ಹೊರಳುತ್ತಿರುವ ಮಹತ್ವದ ವಿದ್ಯಮಾನ ಸದ್ದಿಲ್ಲದೆ ನಡೆಯುತ್ತಿದೆ. ಕನ್ನಡದಿಂದ ದೂರವೇ ಉಳಿದಿದ್ದ ಮದರಸದ ಮಕ್ಕಳೀಗ ಕನ್ನಡದಲ್ಲೇ ಪಾಠ, ಪ್ರವಚನಗಳನ್ನು ಕೇಳುತ್ತಿದ್ದಾರೆ. ಕನ್ನಡದಲ್ಲೇ ಪರೀಕ್ಷೆ ಬರೆಯುತ್ತಾರೆ, ಕನ್ನಡದಲ್ಲಿ ಸುಲಲಿತವಾಗಿ ವ್ಯವಹರಿಸಲು ತೊಡಗಿದ್ದಾರೆ.

ಮದರಸಗಳಲ್ಲಿ ಅರೇಬಿಕ್ ಭಾಷೆಯಲ್ಲಿ ಮೂಲಭೂತವಾದಿ ಚಟುವಟಿಕೆಗಳಿಗೆ ಪೂರಕವಾಗಿ ಪಾಠಗಳನ್ನು ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ಉತ್ತರ ರೂಪವಾಗಿಯೂ ಈ ಕನ್ನಡ ಪಠ್ಯಕ್ರಮವನ್ನು ಜಾರಿಗೆ ತರಲಾಗಿದೆ. ಈ ಮೂಲಕ ಮದರಸಗಳಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗುತ್ತಿದೆ.

ದಕ್ಷಿಣ ಕರ್ನಾಟಕ ಸಲಫಿ ಎಜುಕೇಶನ್ ಬೋರ್ಡ್ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳ ಎಲ್ಲ 60 ಮದರಸಗಳ ೧ರಿಂದ ೮ನೇ ತರಗತಿವರೆಗಿನ ಎಲ್ಲ ಪಠ್ಯಗಳನ್ನೂ ಕನ್ನಡದಲ್ಲೇ ಮುದ್ರಿಸಲಾಗಿದ್ದು, ಪಾಠ- ಪ್ರವಚನ ನಡೆಯುತ್ತಿವೆ. ಸುಮಾರು ೬ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ೧೦ನೇ ತರಗತಿವರೆಗೂ ಇದನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ಅರೇಬಿಕ್‌ಗೆ ಐಚ್ಛಿಕ ಸ್ಥಾನ:

ಸಾಮಾನ್ಯವಾಗಿ ಮದರಸಗಳಲ್ಲಿ ಪ್ರತಿ ತರಗತಿಯಲ್ಲೂ ಕರ್ಮಶಾಸ್ತ್ರ, ಕುರಾನ್, ಹದೀಸ್, ಪ್ರವಾದಿ ವಚನಾಮೃತ, ಆರಾಧನಾ ಕ್ರಮಗಳು, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಗುಣಸ್ವಭಾವಗಳು ಇತ್ಯಾದಿ ಪಠ್ಯಕ್ರಮಗಳನ್ನು ಬೋಧಿಸಲಾಗುತ್ತದೆ. ಇವುಗಳಲ್ಲಿ ಕುರಾನ್ ಮತ್ತು ಹದೀಸ್ ಪಠ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಕನ್ನಡದಲ್ಲೇ ಇವೆ. ಕುರಾನ್, ಹದೀಸ್ ಪಠ್ಯಗಳು ಅರೇಬಿಕ್‌ನಲ್ಲಿದ್ದರೂ ಅದರ ಅರ್ಥ ವಿವರಣೆ ಇರುವುದೆಲ್ಲವೂ ಕನ್ನಡದಲ್ಲೇ. ಈ ಹಿಂದೆ ಇವೆಲ್ಲವನ್ನೂ ಪ್ರಥಮ ಭಾಷೆಯಾಗಿ ಅರೇಬಿಕ್‌ನಲ್ಲೇ ಬೋಧಿಸಲಾಗುತ್ತಿತ್ತು. ಈಗ ಅರೇಬಿಕ್ ಐಚ್ಛಿಕ ಭಾಷೆಯ ಸ್ಥಾನ ಪಡೆದುಕೊಂಡಿದೆ.

ಈ ಹಿಂದೆ ಕನ್ನಡ ಭಾಷೆಯಲ್ಲಿ ಪರಿಣತಿ ಇರುವ ಮದರಸ ಶಿಕ್ಷಕರ ಕೊರತೆ ಇತ್ತು. ಅದಕ್ಕೆ ಅನುಗುಣವಾಗಿ ಪಠ್ಯಗಳೆಲ್ಲವೂ ಅರೇಬಿಕ್, ಮಲಯಾಳಂನಲ್ಲೇ ಇದ್ದವು. ಈ ಭಾಷೆಗಳನ್ನು ಮಕ್ಕಳು ಕಲಿತು, ಪರಿಣತಿ ಪಡೆಯಬೇಕಾದ ಅನಿವಾರ್ಯತೆ ಇತ್ತು. ಇದನ್ನು ಮನಗಂಡು ಸಲಫಿ ಎಜ್ಯುಕೇಶನ್ ಬೋರ್ಡ್ ವತಿಯಿಂದ ಪ್ರಥಮ ಬಾರಿಗೆ ೨೦೧೦ರಲ್ಲಿ ೧ನೇ ತರಗತಿಗೆ ಕನ್ನಡ ಪಠ್ಯಕ್ರಮವನ್ನು ಪರಿಚಯಿಸಿದೆವು. ಅರೇಬಿಕ್, ಮಲಯಾಳಂನಲ್ಲಿದ್ದ ಪಠ್ಯಗಳನ್ನು ಅದೇ ರೂಪದಲ್ಲಿ ಕನ್ನಡಕ್ಕೆ ಅನುವಾದಿಸಿದೆವು. ನಂತರ ಹಂತ ಹಂತವಾಗಿ ಒಂದೊಂದೇ ತರಗತಿಗೆ ಪಠ್ಯಕ್ರಮವನ್ನು ವಿಸ್ತರಣೆ ಮಾಡಿದ್ದೇವೆ. ಕಳೆದ ವರ್ಷವಷ್ಟೇ ೮ನೇ ತರಗತಿ ಮಕ್ಕಳಿಗೂ ಕನ್ನಡ ಪಠ್ಯಕ್ರಮ ಮಾಡಿದ್ದೇವೆ ಎನ್ನುತ್ತಾರೆ ಮೂವ್‌ಮೆಂಟ್‌ನ ಅಧ್ಯಕ್ಷ ಇಸ್ಮಾಯಿಲ್ ಶಾಫಿ.

ಸುನ್ನಿ ಸಂಘಟನೆಗಳೂ ಕನ್ನಡದೆಡೆಗೆ:

ಸಲಫಿ ಮದರಸಗಳಲ್ಲಿ ಕನ್ನಡ ಕಲಿಕೆಯಿಂದ ಪ್ರೇರೇಪಿತರಾದ ಸುನ್ನಿ ಸಂಘಟನೆಗಳು ನಮ್ಮ ಕನ್ನಡ ಪಠ್ಯಪುಸ್ತಕಗಳನ್ನು ಪಡೆದುಕೊಂಡು ಅವರ ಮದರಸಗಳಲ್ಲೂ ಕನ್ನಡ ಕಲಿಕೆ ಆರಂಭಿಸುವ ಉತ್ಸಾಹದಲ್ಲಿದ್ದಾರೆ. ಹೀಗಾದರೆ ಇಡೀ ರಾಜ್ಯದ ಎಲ್ಲ ಮದರಸಗಳೂ ಕನ್ನಡಮಯವಾಗಲಿವೆ ಎಂದು ಶಾಫಿ ಸಂತೋಷ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ವಿಸ್ತರಣೆ

ದಕ್ಷಿಣ ಕರ್ನಾಟಕದಲ್ಲಿ ಸಲಫಿ ಪಂಗಡದ ಅತಿ ಕಡಿಮೆ ಮದರಸಗಳಿದ್ದರೆ, ಉತ್ತರ ಕರ್ನಾಟಕದಲ್ಲಿ ಸಾವಿರಕ್ಕೂ ಅಧಿಕ ಮದರಸಗಳು ಕಾರ್ಯ ನಿರ್ವಹಿಸುತ್ತಿವೆ. ದಕ್ಷಿಣ ಕರ್ನಾಟಕದ ಮದರಸಗಳಲ್ಲಿ ಜನ ಕನ್ನಡ ಭಾಷೆಯನ್ನೂ ಅರಿತುಕೊಂಡಿದ್ದಾರೆ. ಆದರೆ ಉರ್ದು ಪ್ರಾಬಲ್ಯ ಹೊಂದಿರುವ ಉತ್ತರ ಕರ್ನಾಟಕದ ಮದರಸಗಳಲ್ಲಿ ಕಲಿತ ಮಕ್ಕಳಿಗೆ ಕನ್ನಡ ಭಾಷಾ ಪ್ರೌಢಿಮೆಯ ಕೊರತೆಯಿದೆ. ಅವರಲ್ಲೂ ಕನ್ನಡ ಭಾಷಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಅಲ್ಲಿನ ಅಹಲೆ ಅದಿಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದ್ದು, ಮುಂದೆ ರಾಜ್ಯದ ಎಲ್ಲ ಮದರಸಗಳಲ್ಲೂ ಕನ್ನಡ ಪಠ್ಯಕ್ರಮ ಜಾರಿಗೊಳಿಸಲಿದ್ದೇವೆ. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಹಾಯಹಸ್ತ ನೀಡುವ ಕುರಿತು ಮಾತುಕತೆ ನಡೆಸಲಾಗಿದೆ. ಸರ್ಕಾರದ ವತಿಯಿಂದಲೇ ಮಾಡಬಹುದು ಅಥವಾ ಅನುದಾನ ನೀಡಿದರೂ ಈ ಕಾರ್ಯ ಸುಗಮವಾಗಲಿದೆ ಎನ್ನುತ್ತಾರೆ ಇಸ್ಮಾಯಿಲ್ ಶಾಫಿ.

ಮದರಸಗಳಲ್ಲಿ ಅರೇಬಿಕ್, ಮಲಯಾಳಂನಲ್ಲಿ ಕಲಿಸಿದರೆ ‘ಇಲ್ಲೇನೋ ನಡೆಯುತ್ತಿದೆ’ ಎಂಬ ಸಂಶಯ ಬರುವುದು ಸ್ವಾಭಾವಿಕ. ಈಗ ಕನ್ನಡದಲ್ಲೇ ಕಲಿಸುತ್ತಿರುವುದರಿಂದ ಜನರ ಸಂಶಯ ನಿವಾರಣೆಯಾಗಿದೆ. ಮದರಸದ ಕನ್ನಡ ಪಠ್ಯಕ್ರಮವನ್ನು ಯಾರು ಬೇಕಾದರೂ ಓದಿ ಅರ್ಥ ಮಾಡಿಕೊಳ್ಳಬಹುದು.

- ಇಸ್ಮಾಯಿಲ್ ಶಾಫಿ, ದಕ್ಷಿಣ ಕರ್ನಾಟಕ ಸಲಫಿ ಮೂವ್‌ಮೆಂಟ್ ಅಧ್ಯಕ್ಷರು

ವರದಿ: ಸಂದೀಪ್ ವಾಗ್ಲೆ

Follow Us:
Download App:
  • android
  • ios